ಬೆಂಗಳೂರು: ನೀವು ಕ್ಯಾಬ್ನಲ್ಲಿ ಪ್ರಯಾಣ ಮಾಡುತ್ತ ಮೊಬೈಲ್ ಕರೆಯಲ್ಲಿ ಪರ್ಸನಲ್ ವಿಚಾರ ಮಾತನಾಡುವಾಗ ಎಚ್ಚರವಹಿಸಿ. ಕೊಂಚ ಯಾಮಾರಿದರೂ ನಿಮ್ಮ ವೀಕ್ನೆಸ್ನ್ನೇ ಬಂಡವಾಳ ಮಾಡಿಕೊಂಡು ಹಣ ಸುಲಿಗೆ ಮಾಡಬಹುದು. ಚಾಲಕನೊಬ್ಬ ಮಹಿಳೆಯಿಂದ ಲಕ್ಷಾಂತರ ರೂ. ಹಣ ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ ಪ್ರಕರಣವೊಂದು ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಸ್ನೇಹಿತನ ಸೋಗಿನಲ್ಲಿ ಕರೆ ಮಾಡಿ ಮಹಿಳೆಗೆ 22 ಲಕ್ಷ ರೂಪಾಯಿ ಹಾಕಿಸಿಕೊಂಡು ವಂಚಿಸಿದ್ದ ಕ್ಯಾಬ್ ಚಾಲಕನನ್ನು ಬೆಂಗಳೂರಿನ ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತನ್ನೊಂದಿಗೆ ಕರೆಯಲ್ಲಿ ಮಾತನಾಡುತ್ತಿರುವುದು ಸ್ನೇಹಿತನಲ್ಲ ಎಂದು ತಿಳಿದ ನಂತರವೂ ಮಹಿಳೆಗೆ ಸ್ನೇಹಿತನ ವಿಚಾರಗಳನ್ನು ಗಂಡನಿಗೆ ತಿಳಿಸುವುದಾಗಿ ಬೆದರಿಸಿ ಆಕೆಯಿಂದ ಹಣ ಅಲ್ಲದೇ 750 ಗ್ರಾಂ ಚಿನ್ನ ಸುಲಿಗೆ ಮಾಡಿದ್ದು, ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ಏನಿದು ಘಟನೆ?: ಹೆಸರಘಟ್ಟ ನಿವಾಸಿ ಕಿರಣ್ ಬಂಧಿತ ಕ್ಯಾಬ್ ಚಾಲಕ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯು ಕಳೆದ ವರ್ಷ ಡಿಸೆಂಬರ್ನಲ್ಲಿ ಇಂದಿರಾನಗರದಿಂದ ಬಾಣಸವಾಡಿಗೆ ಕ್ಯಾಬ್ ಬುಕ್ ಮಾಡಿದ್ದರು. ಬಳಿಕ ಕ್ಯಾಬ್ನಲ್ಲಿ ಹೋಗುವಾಗ ಮೊಬೈಲ್ನಲ್ಲಿ ಸ್ನೇಹಿತನ ವಿಚಾರಗಳನ್ನು ಮಾತನಾಡಿದ್ದರು. ಈ ಹಿಂದೆ ಕ್ಲಾಸ್ಮೇಟ್ ಆಗಿದ್ದ ಸ್ನೇಹಿತನ ವಿಚಾರಗಳ ಬಗ್ಗೆ ಚಾಲಕ ಸೂಕ್ಷ್ಮವಾಗಿ ಕದ್ದಾಲಿಸಿಕೊಂಡಿದ್ದ. ಇದಾದ ಕೆಲವು ದಿನಗಳ ಬಳಿಕ ಸ್ನೇಹಿತನ ಸೋಗಿನಲ್ಲಿ ಮಹಿಳೆಗೆ ಸಂದೇಶ ಕಳುಹಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾನು ನಿನ್ನ ಬಾಲ್ಯದ ಸ್ನೇಹಿತ ಎಂದು ಪರಿಚಯಿಸಿಕೊಂಡ ಕ್ಯಾಬ್ ಚಾಲಕ ಮಹಿಳೆ ಜೊತೆ ಸಂಪರ್ಕ ಬೆಳೆಸಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದ. ಈ ಮಧ್ಯೆ ತಾನು ಆರ್ಥಿಕ ಸಂಕಷ್ಟದಲ್ಲಿದ್ದು, ಹಣದ ಅಗತ್ಯವಿದೆ ಎಂದು ನಿವೇದನೆ ಮಾಡಿಕೊಂಡಿದ್ದ. ಬಳಿಕ ಆತನ ಕಷ್ಟಕ್ಕೆ ಸ್ಪಂದಿಸಿದ ಮಹಿಳೆ ಆನ್ಲೈನ್ ಮೂಲಕ ಆರೋಪಿಯ ಬ್ಯಾಂಕ್ ಖಾತೆಗೆ 22 ಲಕ್ಷ ರೂ. ಹಣ ವರ್ಗಾಯಿಸಿದ್ದರು. ಕೆಲ ದಿನಗಳ ಬಳಿಕ ತನ್ನೊಂದಿಗೆ ಮಾತನಾಡುತ್ತಿರುವುದು ಬಾಲ್ಯ ಸ್ನೇಹಿತನಲ್ಲ ಎಂದು ಗೊತ್ತಾಗುತ್ತಿದ್ದಂತೆ ಅಂತರ ಕಾಯ್ದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಇಷ್ಟಕ್ಕೆ ಸುಮ್ಮನಾಗದ ಕ್ಯಾಬ್ ಚಾಲಕ ನಿನ್ನ ಬಳಿಯಿರುವ ಚಿನ್ನಾಭರಣಗಳನ್ನು ನೀಡದಿದ್ದರೆ ಸ್ನೇಹಿತನೊಂದಿಗಿನ ವಿಚಾರಗಳನ್ನು ಗಂಡನಿಗೆ ಹೇಳುವುದಾಗಿ ಬೆದರಿಸಿದ್ದಾನೆ. ಬೇರೆ ದಾರಿ ತೋಚದೇ ಚಾಲಕನಿಗೆ ತನ್ನ ಬಳಿಯಿದ್ದ 750 ಗ್ರಾಂ ಚಿನ್ನವನ್ನೂ ಕಳೆದ ಏಪ್ರಿಲ್ನಲ್ಲಿ ನೀಡಿದ್ದರು. ಇದನ್ನ ಅರಿಯದ ಮಹಿಳೆಯ ಪತಿ ಆಭರಣದ ಬಗ್ಗೆ ವಿಚಾರಿಸಿದಾಗ ಮೋಸಕ್ಕೊಳಗಾಗಿರುವ ವಿಷಯದ ಬಗ್ಗೆ ಹೇಳಿದ್ದರು. ಬಳಿಕ ವಂಚನೆ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ಯಾಬ್ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ನಾಲ್ಕು ಮದುವೆಯಾಗಿ ವಂಚಿಸಿದ ಆರೋಪ.. ಪತ್ನಿಯರ ಕೈಗೆ ಸಿಕ್ಕಿಬಿದ್ದ ಸಲ್ಮಾನ್ ಖಾನ್ಗೆ ರಸ್ತೆಯಲ್ಲೇ ಧರ್ಮದೇಟು