ಬೆಂಗಳೂರು: ಬಾಡಿಗೆ ಬೈಕಿನಲ್ಲಿ ಬಂದು ಮಾರಾಟಕ್ಕಿಟ್ಟಿದ್ದ ಬೈಕ್ಅನ್ನು ಟೆಸ್ಟ್ ರೈಡ್ ಮಾಡುವುದಾಗಿ ಹೇಳಿ ಬೈಕ್ ಕದ್ದೊಯ್ದ ಘಟನೆ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಜೈ ಮಾರುತಿ ನಗರದಲ್ಲಿ ನಡೆದಿದೆ. ರ‍್ಯಾಪಿಡೋ ಬೈಕಿನಲ್ಲಿ ಬಂದಿದ್ದ ಖದೀಮ ಟೆಸ್ಟ್ ಡ್ರೈವ್ ನೆಪದಲ್ಲಿ ಯಮಹಾ ಆರ್ ಎಕ್ಸ್ 135 ಬೈಕ್ ಸಮೇತ ಪರಾರಿಯಾಗಿದ್ದಾನೆ.
ರಾಘವೇಂದ್ರ ಸ್ವಾಮಿ ಎಂಬುವರು ಒಎಲ್ಎಕ್ಸ್ನಲ್ಲಿ ತಮ್ಮ ಯಮಹಾ ಆರ್ ಎಕ್ಸ್ 135 ಬೈಕ್ ಮಾರಾಟಕ್ಕಿಟ್ಟಿದ್ದರು. ಜುಲೈ 16ರಂದು ಕರೆ ಮಾಡಿದ್ದ ರಾಹುಲ್ ಎಂಬಾತ ಬೈಕಿನ ಫೈನಲ್ ರೇಟ್, ಫೋಟೋ, ಲೊಕೇಷನ್ ಕೇಳಿ ಪಡೆದಿದ್ದನು. ಅದೇ ದಿನ ಮಧ್ಯಾಹ್ನ 12:45ರ ಸುಮಾರಿಗೆ ರ‍್ಯಾಪಿಡೋ ಬೈಕಿನಲ್ಲಿ ಬಂದಿದ್ದ ಆರೋಪಿ, ರ‍್ಯಾಪಿಡೋ ಕ್ಯಾಪ್ಟನ್ ಬಳಿ 'ತನ್ನನ್ನ ಮೆಜೆಸ್ಟಿಕ್ ಬಳಿ ಡ್ರಾಪ್ ಮಾಡಬೇಕು ಎಂದು ಕಾಯುವಂತೆ' ಸೂಚಿಸಿದ್ದನು. ಬಳಿಕ ಟೆಸ್ಟ್ ಡ್ರೈವ್ ನೋಡುವುದಾಗಿ ಬೈಕ್ ಪಡೆದು ತೆರಳಿದ್ದ.
ಇತ್ತ ರ‍್ಯಾಪಿಡೋ ಬೈಕ್ ಚಾಲಕನನ್ನು ಆರೋಪಿಯ ಸ್ನೇಹಿತ ಎಂದು ಭಾವಿಸಿದ್ದ ಬೈಕ್ ಮಾಲೀಕ, ತನ್ನ ಬೈಕ್ ನೀಡಿದ್ದನು. ಟೆಸ್ಟ್ ಡ್ರೈವ್ಗೆ ಹೋದವನು ವಾಪಸ್ ಬಾರದಿದ್ದಾಗ ರ‍್ಯಾಪಿಡೋ ಬೈಕ್ ಚಾಲಕನ ಬಳಿ 'ನಿನ್ನ ಸ್ನೇಹಿತನಿಗೆ ಕರೆ ಮಾಡು' ಎಂದು ಬೈಕ್ ಮಾಲೀಕ ಹೇಳಿದಾಗ ಆತ ತನ್ನ ಸ್ನೇಹಿತ ಅಲ್ಲ, ಬದಲಿಗೆ ರ‍್ಯಾಪಿಡೋ ಗ್ರಾಹಕ ಎಂದು ಹೇಳಿದ್ದಾನೆ. ನಂತರ ಆರೋಪಿಗೆ ಕರೆ ಮಾಡಿದಾಗ ಆತ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ತಕ್ಷಣ ಮಾಲೀಕ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಐಷಾರಾಮಿ ಕಾರು ಕದಿಯುತ್ತಿದ್ದವನ ಬಂಧನ: ಪೊಲೀಸರ ನಿದ್ದೆಗೆಡಿಸಿದ್ದ ಐಷಾರಾಮಿ ಕಾರುಗಳನ್ನೇ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಘಟನೆ ಇತ್ತೀಚೆಗೆ ಮೈಸೂರಿನ ವಿವಿ ಪುರಂನಲ್ಲಿ ನಡೆದಿತ್ತು. ಯಾದವಗಿರಿ ನಿವಾಸಿ ಬಿ ಸತೀಶ್ ಎಂಬವರ ಕಾರನ್ನು ಆರೋಪಿ ರಾತ್ರೋರಾತ್ರಿ ಕಳ್ಳತನ ಮಾಡಿ ಪರಾರಿಯಾಗಿದ್ದನು. ಕಾರು ಕಳ್ಳತನವಾಗಿದ್ದ ಬಗ್ಗೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸತೀಶ್ ಅವರ ಕಾರಿನಲ್ಲಿ ಜಿಪಿಎಸ್ ಟ್ರ್ಯಾಕರ್ ಇರುವುದನ್ನು ತಿಳಿದುಕೊಂಡ ಪೊಲೀಸರು ಯಶಸ್ವಿಯಾಗಿ ಕಾರಿನ ಲೊಕೇಷನ್ ಕಂಡು ಹಿಡಿದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ನಡೆಸಿದ್ದ ವಿಚಾರಣೆಯಿಂದ ಮೈಸೂರಿನಲ್ಲಿ ನಡೆದಿದ್ದ ಇನ್ನೂ ಎರಡು ಐಷಾರಾಮಿ ಕಾರುಗಳ ಕಳ್ಳತನದ ಹಿಂದೆ ಈತನದ್ದೇ ಕೈವಾಡ ಇತ್ತು ಎಂಬುದು ಬಯಲಾಗಿತ್ತು.
ಇದನ್ನೂ ಓದಿ: ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಮನೆಗಳ್ಳತನ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಆರೋಪಿಗಳ ಬಂಧನ