ಬೆಂಗಳೂರು: ರಾಜಧಾನಿಯಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದಾರೆ. ತಲೆಮರೆಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿ ಜುನೈದ್ ಪತ್ತೆಗಾಗಿ ಲುಕ್ ಔಟ್ ನೋಟಿಸ್ ಹೊರಡಿಸಲು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಸಿಸಿಬಿ ಶಿಫಾರಸು ಮಾಡಿದೆ. ಈಗಾಗಲೇ ಬಂಧಿತರಾಗಿರುವ ಶಂಕಿತ ಆರೋಪಿಗಳನ್ನು ನಿಯಂತ್ರಿಸುತ್ತಿದ್ದ ಆರೋಪ ಜುನೈದ್ ಮೇಲಿದೆ.
2017ರಲ್ಲಿ ಆರ್.ಟಿ.ನಗರದಲ್ಲಿ ನಡೆದಿದ್ದ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಜುನೈದ್, ಬಳಿಕ 2020ರಲ್ಲಿ ರಕ್ತ ಚಂದನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಜೈಲು ಸೇರಿ ಹೊರಬಂದಿದ್ದ. ಜೈಲಿನಲ್ಲಿ ಉಗ್ರ ಟಿ.ನಜೀರ್ ಸಂಪರ್ಕಕ್ಕೆ ಬಂದಿದ್ದ. 2021ರಲ್ಲಿ ಜೈಲಿನಿಂದ ಹೊರಬಂದ ಬಳಿಕ ನ್ಯಾಯಾಲಯದ ಮುಂದೆ ಹಾಜರಾಗದೆ ದುಬೈಗೆ ಹಾರಿ ಜುನೈದ್ ತಲೆಮರೆಸಿಕೊಂಡಿದ್ದ. ಸದ್ಯ ಅಜೆರ್ಬೈಜಾನ್ ದೇಶದಲ್ಲಿ ಜುನೈದ್ ತಲೆಮರೆಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಕೇಂದ್ರದ ರಾಷ್ಟೀಯ ತನಿಖಾ ದಳಕ್ಕೆ (ಎನ್ಐಎ)ಗೆ ಮಾಹಿತಿ ನೀಡಿರುವ ಸಿಸಿಬಿ, ಲುಕ್ ಔಟ್ ನೋಟಿಸ್ ಜಾರಿ ಮಾಡುವಂತೆ ಮನವಿ ಸಲ್ಲಿಸಿದೆ.
ದುಬೈನಿಂದಲೇ ಜುನೈದ್ ಫಂಡಿಂಗ್: ಉಗ್ರ ಕೃತ್ಯಗಳಿಗೆ ದುಬೈನಿಂದಲೇ ಶ್ರೀಮಂತರಿಂದ ಜುನೈದ್ ಫಂಡಿಂಗ್ ಮಾಡಿಸುತ್ತಿದ್ದ.ನಜೀರ್ ಗ್ರೂಪ್ಗೆ ಹವಾಲಾ ಮೂಲಕ ಹಣ ಬಂದ ಬಗ್ಗೆ ಇಂಟೆಲಿಜೆನ್ಸ್ ಬ್ಯೂರೋಗೆ ಮಾಹಿತಿ ಲಭ್ಯವಾಗಿತ್ತು. ಆ ಬಳಿಕ ಪ್ರಕರಣ ಬೆನ್ನತ್ತಿದಾಗ ಶಂಕಿತರು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ-2019 ಅಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸೆರೆಯಾದ ಶಂಕಿತ ಉಗ್ರರ ಹಿಂದಿರುವ ಮಾಸ್ಟರ್‌ಮೈಂಡ್ ಯಾರು ಗೊತ್ತಾ?
ಬೆಂಗಳೂರಲ್ಲಿ ಸ್ಫೋಟ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪದ ಮೇಲೆ ಐವರು ಶಂಕಿತ ಉಗ್ರರನ್ನು ಜುಲೈ 19 ರಂದು ಪೊಲೀಸರು ಅರೆಸ್ಟ್ ಮಾಡಿದ್ದರು. ಸುಹೇಲ್, ಉಮರ್, ಜಾಹಿದ್, ಮುದಾಸಿರ್ ಹಾಗೂ ಫೈಜರ್ ಎಂಬುವರನ್ನು ಬಂಧಿಸಲಾಗಿತ್ತು. ಬೆಂಗಳೂರಿನ ಬಸ್ ನಿಲ್ದಾಣ, ಜನ ಸಂದಣಿ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಆರೋಪ ಇವರ ಮೇಲಿದೆ. ಬಂಧಿತರಿಂದ 7 ಕಂಟ್ರಿ ಮೇಡ್ ಪಿಸ್ತೂಲ್, 45 ಜೀವಂತ ಗುಂಡುಗಳು, ವಾಕಿಟಾಕಿ ಸೆಟ್ಸ್, ಒಂದು ಡ್ರ್ಯಾಗರ್ ಹಾಗೂ 12 ಮೊಬೈಲ್ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. ಹಾಗೆಯೇ ಪ್ರಕರಣದ ಐದನೇ ಆರೋಪಿ ಜಾಯಿದ್ ತಬರೇಜ್ನ ಕೊಡಿಗೆಹಳ್ಳಿಯಲ್ಲಿರುವ ಮನೆಯಲ್ಲಿ ನಾಲ್ಕು ಜೀವಂತ ಗ್ರೆನೇಡ್ ಪತ್ತೆಯಾಗಿದ್ದು, ಸಿಸಿಬಿ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.
ಸಿಸಿಬಿ ತನಿಖೆ: ಶಂಕಿತ ಐವರನ್ನು ಸಿಸಿಬಿ ಏಳು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ. ಜೀವಂತೆ ಗ್ರೇನಡ್ ಮೂಲ, ಸ್ಫೋಟಕ್ಕೆ ಸಂಚು ರೂಪಿಸಿದ್ದ ಸ್ಥಳಗಳು, ಅವರ ಪ್ಲ್ಯಾನ್ ಏನಾಗಿತ್ತು ಎಂಬುದರ ಬಗ್ಗೆ ಸಿಸಿಬಿ ತೀವ್ರ ತನಿಖೆ ನಡೆಸುತ್ತಿದೆ.
ಶಂಕಿತರ ಹೇಳಿಕೆಗಳನ್ನು ಪಡೆದುಕೊಂಡಿದ್ದೇವೆ. ವಶಕ್ಕೆ ಪಡೆದ 12 ಮೊಬೈಲ್ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರಿಟ್ರೀವ್ಗೆ ಕಳುಹಿಸಲಾಗಿದೆ. ಬಂಧಿತರ ವಿಚಾರಣೆ ಬಳಿಕ ಇನ್ನಿತರರನ್ನ ಕರೆಯಿಸಿ ವಿಚಾರಣೆ ನಡೆಸಲಾಗುವುದು. ಬೆಂಗಳೂರು ಸರಣಿ ಬಾಂಬ್ ಸ್ಫೋಟ ಮತ್ತು ಈ ಪ್ರಕರಣದ ಪ್ರಮುಖ ಆರೋಪಿ ಟಿ. ನಜೀರ್ನನ್ನು ಬಾಡಿ ವಾರೆಂಟ್ ಮೇರೆಗೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಅವರು ಈ ಮೊದಲು ಮಾಹಿತಿ ನೀಡಿದ್ದರು.