ಬೆಂಗಳೂರು: ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಬ್ಯಾಂಕ್‌ನಿಂದ ಕೋಟಿ ಕೋಟಿ ಸಾಲ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಶೇಷಾದ್ರಿಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. 2013ರಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಕೃಷ್ಣಕುಮಾರ್ ಬಂಧಿತ ಆರೋಪಿ. ಬ್ಯಾಂಕ್ಗಳಿಗೆ ಸುಮಾರು 20 ಕೋಟಿ ರೂ ವಂಚಿಸಿರುವ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದಾನೆ.
ಯಾರದ್ದೋ ಜಾಗ, ಬಿಡಿಎ ನಿವೇಶನಗಳನ್ನ ಖರೀದಿಸುವ ನೆಪದಲ್ಲಿ ಅಲ್ಪ ಪ್ರಮಾಣದ ಮುಂಗಡ ಹಣ ನೀಡಿ ದಾಖಲೆಗಳ ಪ್ರತಿ ಪಡೆದುಕೊಳ್ಳುತ್ತಿದ್ದ ಆರೋಪಿಗಳು, ನಂತರ ಅದಕ್ಕೆ ತಾವೇ ಮಾಲೀಕರು ಎಂಬಂತೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಬಳಿಕ ಆರೋಪಿಗಳಲ್ಲಿ ಒಬ್ಬರು ಪ್ರತಿಷ್ಠಿತ ಕಂಪನಿಯ ಉದ್ಯೋಗಿ ಎಂಬಂತೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ. ಬಳಿಕ ಈ ಜಾಗ, ನಿವೇಶನಗಳನ್ನ ಖರೀದಿಸುವುದಾಗಿ ಬ್ಯಾಂಕ್‌ನಿಂದ ಸಾಲ ಪಡೆದುಕೊಳ್ಳುತ್ತಿದ್ದರು.
ಪ್ರಕರಣದಲ್ಲಿ ಕೆಲ ಆರೋಪಿಗಳನ್ನು ಬಂಧಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಆದರೆ, ಕೃಷ್ಣಕುಮಾರ್ ಮಾತ್ರ 2013ರಿಂದಲೂ ತಲೆ ಮರೆಸಿಕೊಂಡಿದ್ದ. ಸದ್ಯ ಬರೋಬ್ಬರಿ 10 ವರ್ಷಗಳ ಬಳಿಕ ಕೃಷ್ಣಕುಮಾರ್ನನ್ನು ಶೇಷಾದ್ರಿಪುರಂ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಸ್ಕ್ಯಾನರ್, ಕೆಲ ನಕಲಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್.ಹೆಚ್.ಟಿ ತಿಳಿಸಿದ್ದಾರೆ.
ಇದನ್ನೂಓದಿ:ಆಭರಣ ಮಳಿಗೆಯಲ್ಲಿ 25 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ: ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು ಸೈಬರ್ ಕ್ರೈಂ ಪೊಲೀಸರ ಮಹತ್ವದ ಕಾರ್ಯಾಚರಣೆ: ಇನ್ನೊಂದು ಅತ್ಯಂತ ಪ್ರಮುಖ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅಮಾಯಕರನ್ನ ಸಂಪರ್ಕಿಸಿ, ಕಡಿಮೆ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಕೊಡುವುದಾಗಿ ನಂಬಿಸಿ ದೇಶಾದ್ಯಂತ ಕೋಟ್ಯಂತರ ರೂಪಾಯಿ ವಂಚಿಸಿದ್ದ ಆರು ಜನ ಆರೋಪಿಗಳನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಮನೋಜ್, ಫಣೀಂದ್ರ, ಚಕ್ರಧರ್, ಶ್ರೀನಿವಾಸ್, ಸೋಮಶೇಖರ್ ಹಾಗೂ ವಸಂತ್ ಕುಮಾರ್ ಬಂಧಿತ ಆರೋಪಿಗಳು. ಬಂಧಿತರು ಸೃಷ್ಟಿಸಿದ್ದ 84 ಬ್ಯಾಂಕ್ ಖಾತೆಗಳಲ್ಲಿ 854 ಕೋಟಿ ಹಣ ವಹಿವಾಟು ಆಗಿದ್ದು, ಸದ್ಯ ಬ್ಯಾಂಕ್ ಖಾತೆಗಳಿಂದ 5 ಕೋಟಿ ರೂ. ಹಣ ಜಪ್ತಿ ಮಾಡಲಾಗಿದೆ.
ಟೆಲಿಗ್ರಾಂ, ವಾಟ್ಸ್ಯಾಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು ಕಡಿಮೆ ಹಣ ಹೂಡಿಕೆ ಮಾಡಿ ಅಧಿಕ ಲಾಭ ಪಡೆಯುವ ವಿವಿಧ ಇನ್‌ಸ್ಟಾಲ್ಮೆಂಟ್ ಆಫರ್ ನೀಡುತ್ತಿದ್ದರು. ಆದರೆ ಹಣ ಹೂಡಿಕೆ ಮಾಡಿದವರಿಗೆ ಯಾವುದೇ ಲಾಭಾಂಶ ನೀಡದೆ ವಂಚಿಸುತ್ತಿದ್ದರು. ಇದೇ ರೀತಿ ಮೋಸ ಹೋಗಿರುವುದರ ಕುರಿತು ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ 2, ಆಗ್ನೇಯ ವಿಭಾಗದಲ್ಲಿ 3, ಈಶಾನ್ಯ ವಿಭಾಗದಲ್ಲಿ 4 ಹಾಗೂ ಉತ್ತರ ವಿಭಾಗದಲ್ಲಿ 8 ಪ್ರಕರಣಗಳು ದಾಖಲಾಗಿದ್ದವು.