ಬೆಂಗಳೂರು: ಅಧಿಕೃತ ಪಟಾಕಿಗಳಿಂದ ಯಾವುದೇ ಮಾಲಿನ್ಯ ಉಂಟಾಗುವುದಿಲ್ಲ, ಅನಧಿಕೃತ ಪಟಾಕಿಗಳೇ ಆರೋಗ್ಯಕ್ಕೆ ಮಾರಕವಾಗಿವೆ. ಅಧಿಕೃತ ಪಟಾಕಿಗಳನ್ನು ಸಿಡಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಪಟಾಕಿ ವ್ಯಾಪಾರಿಗಳ ಸಂಘದ ಪದಾಧಿಕಾರಿ ಜೆ ಮದನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಏಕಾಏಕಿ ಪಟಾಕಿ ನಿಷೇಧಿಸಿರುವುದರಿಂದ ಪಟಾಕಿ ವಹಿವಾಟಿನ ಮೇಲೆ ಭಾರಿ ಪರಿಣಾಮ ಬೀರಿದೆ. ಇದನ್ನೇ ನಂಬಿಕೊಂಡಿರುವವರಿಗೆ ಕಷ್ಟವಾಗಲಿದೆ. ಅಧಿಕೃತ ಪಟಾಕಿ ಸಿಡಿಸುವುದರಿಂದ ಯಾವುದೇ ಮಾಲಿನ್ಯ ಉಂಟಾಗುವುದಿಲ್ಲ ಎಂದು ಸರ್ಮರ್ಥಿಸಿಕೊಂಡರು.
* ಪಟಾಕಿ ಮಾರಾಟ ನಿಷೇಧದಿಂದ ಆಗಿರುವ ನಷ್ಟವೆಷ್ಟು?
ಪಟಾಕಿ ನಿಷೇಧದಿಂದ ಭಾರಿ ನಷ್ಟ ಆಗೇ ಆಗುತ್ತದೆ. ಪೊಲೀಸರು ದಂಡ ಹಾಕುವ ಭಯದಿಂದ ಜನರು ಹೆದರುತ್ತಿದ್ದು, ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಪಟಾಕಿಗಳನ್ನು ಈಗಾಗಲೇ ಉತ್ಪಾದಕರಿಂದ ಖರಿದಿಸಿದ್ದೇವೆ. ಆದ್ರೆ ಈ ಪಟಾಕಿಗಳು ಮಾರಾಟವಾಗದೆ ಹಾಗೆಯೇ ಉಳಿಯಲಿವೆ. ಇದರಿಂದ ಈ ಕಸುಬನ್ನೇ ನೆಚ್ಚಿಕೊಂಡಿರುವ 8 ಸಾವಿರಕ್ಕೂ ಹೆಚ್ಚು ಮಂದಿಗೆ ಸಾಕಷ್ಟು ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
*ತಜ್ಞರ ವರದಿ ಪ್ರಕಾರ ಪಟಾಕಿಯ ಹೊಗೆಯಿಂದ ಕೊರೊನಾ ಸೋಂಕಿತರಿಗೆ ಸಮಸ್ಯೆಯಾಗುತ್ತೆ ಎಂಬ ವರದಿ ನೀಡಿದೆ - ಇದಕ್ಕೇನಂತೀರಿ?
ಈ ವಿಚಾರವನ್ನು ತಜ್ಞರು ಆರು ತಿಂಗಳ ಮೊದಲೇ ತಿಳಿಸಬಹುದಿತ್ತು. ನಾವು ಎಲ್ಲಾ ತಯಾರಿ ಮಾಡಿದ ಬಳಿಕ ಈಗ ಹೇಳುತ್ತಿರುವುದು ಏಕೆ?. ನಗರದಲ್ಲಿ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯಗಳನ್ನು ಸುಟ್ಟು ಹಾಕುತ್ತಿರುವುದರಿಂದ ಹೊಗೆ ಉಂಟಾಗುವುದಿಲ್ಲವೇ?. ದೇಶದಲ್ಲಿ ಅತಿ ಹೆಚ್ಚು ಮಾಲಿನ್ಯ ನಗರವೆಂದರೆ ಅದು ದೆಹಲಿ. ಅಲ್ಲಿ ಪಟಾಕಿ ನಿಷೇಧಿಸಿ ವರ್ಷಗಳೇ ಕಳೆದಿದೆ. ಆದ್ರೆ ಈಗಲೂ ಕೂಡಾ ದೆಹಲಿಯೇ ಅತ್ಯಂತ ಮಾಲಿನ್ಯ ನಗರವಾಗಿ ಗುರುತಿಸಿಕೊಂಡಿದೆ. ಶೇ.90 ರಷ್ಟು ಮಾಲಿನ್ಯ ಉಂಟಾಗುವುದು ವಾಹನ ಮತ್ತು ಕೈಗಾರಿಕೆಗಳಿಂದ. ಅಕ್ರಮ ಪಟಾಕಿಗಳಿಂದ ಮಾಲಿನ್ಯ ಉಂಟಾಗುತ್ತಿದೆಯೇ ಹೊರತು ಅಧಿಕೃತ ಪಟಾಕಿಗಳಿಂದ ಅಲ್ಲ. ಅಕ್ರಮ ಪಟಾಕಿ ಉತ್ಪಾದಕರು ಪಟಾಕಿಗೆ ಚರ್ ಕೋಲ್ ಪೌಡರ್, ಬೂದಿ ತುಂಬಿಸುತ್ತಾರೆ. ಇದರಿಂದಾಗಿಯೇ ಕಪ್ಪು ಹೊಗೆ ಬರುತ್ತದೆ. ಆದರೆ ಒಳ್ಳೆಯ ಪಟಾಕಿ ಸಿಡಿಸುವುದರಿಂದ ಹೆಚ್ಚಿನ ಹೊಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
*ಹಸಿರು ಪಟಾಕಿ ಎಂದರೇನು?
ಪರಿಸರ ಇಲಾಖೆಯ ನಿಯಮದಂತೆ ಉತ್ಪಾದಿಸುವ ಪಟಾಕಿಗಳಲ್ಲಿ ಹೊಗೆಯ ಪ್ರಮಾಣ ಶೇ. 40 ರಷ್ಟು ಕಡಿಮೆಯಿದೆ. ಆದರೆ ಅಕ್ರಮ ಪಟಾಕಿಗಳಿಂದಲೇ ಹೊಗೆ ಹೆಚ್ಚಾಗಿ ಹೊರಹೊಮ್ಮುತ್ತಿರುವುದು. ಹಾಗಾಗಿ ಹೊಸೂರಿನಲ್ಲಿ ಸಿಗುವಂತಹ ಅಗ್ಗದ ಅನಧಿಕೃತ ಪಟಾಕಿಗಳನ್ನು ನಿಲ್ಲಿಸಬೇಕು. ಅಲ್ಲಿ ಖರೀದಿಸಿದರೆ ಸರ್ಕಾರಕ್ಕೂ ತೆರಿಗೆ ನಷ್ಟವಾಗುತ್ತದೆ. ಹಸಿರು ಪಟಾಕಿಯನ್ನು ಅನುಮತಿ ಕೊಟ್ಟಿರುವುದು ಸರಿಯಾಗಿಯೇ ಇದೆ. ಪರವಾನಿಗೆ ಇರುವಂತಹ ಪಟಾಕಿ ಸಿಡಿಸಿದರೆ, ಹೊಗೆಯ ಪ್ರಮಾಣ ಗಣನೀಯವಾಗಿ ಕಡಿಮೆಯಿರುತ್ತದೆ. ನಮ್ಮಲ್ಲಿ ಪಟಾಕಿ ಕೊಂಡುಕೊಂಡವರಲ್ಲಿ ಯಾರೊಬ್ಬರೂ ಕಾಯಿಲೆ ಬಂದಿದೆ ಎಂದು ಹೇಳಿಲ್ಲ. ಆದ್ರೆ, ಜನರಿಗೆ ಯಾವುದು ಹಸಿರು ಪಟಾಕಿ, ಯಾವುದು ನಕಲಿ ಪಟಾಕಿ ಎನ್ನುವ ಗೊಂದಲ ಇದೆ ಎಂದರು.
*ಅಧಿಕೃತ ಪಟಾಕಿಯ ಮಾನದಂಡಗಳೇನು?
2017 ರಲ್ಲೇ ಸುಪ್ರೀಂಕೋರ್ಟ್ ಕೆಲವು ಪಟಾಕಿಗಳ ಮೇಲೆ ನಿರ್ಬಂಧ ಹೇರಿದೆ. ಕೇಂದ್ರ ಸರ್ಕಾರದ ನೀರಿ (NEERI) ಸಂಸ್ಥೆಯು ಪಾಟಾಕಿಗಳಲ್ಲಿ ಬಳಸಬೇಕಾದ ಸಿಡಿ ಮದ್ದುಗಳ ಪ್ರಮಾಣಗಳನ್ನು ನಿಗದಿಪಡಿಸುತ್ತದೆ. ಅಧಿಕೃತ ಪಟಾಕಿ ಡೀಲರ್ಗಳು ಅದನ್ನೇ ಪಾಲಿಸುತ್ತಿದ್ದಾರೆ. ನೀರಿಯ ಪ್ರಮಾಣಪತ್ರ ಪಡೆದು ಹಾಗೂ ಅದು ನಿಗದಿ ಪಡಿಸಿದ ಪ್ರಮಾಣವನ್ನೇ ಅಧಿಕೃತ ಪಟಾಕಿ ತಯಾರಿಸುವ ಕಾರ್ಖಾನೆಗಳು ಪಾಲಿಸುತ್ತಿದ್ದಾರೆ. ಇದರಲ್ಲಿ ಮಾಲಿನ್ಯ ಉಂಟಾಗುವ ಪ್ರಮಾಣ ಅತ್ಯಂತ ಕಡಿಮೆಯಿದೆ ಎಂದು ತಿಳಿಸಿದರು.