ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಣದಾಸೆಗೆ ಗರ್ಭಿಣಿ ಹಸುವಿನ ಹತ್ಯೆ ಮಾಡಲಾಗಿದ್ದು, ಕಳ್ಳತನ ಮಾಡಿ ಕೊಂದ ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬರ್ಕತ್, ಮೊಹಮದ್, ಇಮ್ರಾನ್ ಪಾಷಾ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಆರೋಪಿ ಸುಹೈಲ್ ಎಂಬಾತ ಪರಾರಿಯಾಗಿದ್ದಾನೆ.
ಜೂನ್ 6 ರಂದು ಹೆಚ್.ಬಿ.ಆರ್.ಲೇಔಟ್ನಲ್ಲಿ ಬೆಳಗಿನ ಜಾವ ಪೊಲೀಸ್ ಸಿಬ್ಬಂದಿ ಗಸ್ತಿನಲ್ಲಿದ್ದ ವೇಳೆ, ಆಟೋದಲ್ಲಿ ಅನುಮಾನಾಸ್ಪದವಾಗಿ ಮೂವರು ವ್ಯಕ್ತಿಗಳು ಓಡಾಡುತ್ತಿದ್ದರು. ಈ ವೇಳೆ, ಆಟೋ ನಿಲ್ಲಿಸುವಂತೆ ಸೂಚಿಸಿದ್ದರು. ಆಗ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಬೆನ್ನಟ್ಟಿ ಆಟೋ ನಿಲ್ಲಿಸಿ ಆರೋಪಿಗಳ ವಿಚಾರಣೆ ನಡೆಸಿದಾಗ ಹಸು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು ಎಂದು ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಓದಿ: ಹಸು ಕೊಂದ ಹುಲಿ ಸೆರೆಗೆ ಕರ್ನಾಟಕ-ತಮಿಳುನಾಡು ಜಂಟಿ ಕಾರ್ಯಾಚರಣೆ
ತೋಪಿನ ಬಳಿಯಿಂದ ಹಸು ಕಳ್ಳತನ: ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ತೋಪಿನ ಬಳಿ ಆರೋಪಿಗಳು ಹಸು ಕಳ್ಳತನ ಮಾಡಿ, ತಮ್ಮ ಮನೆಯ ಬಳಿ ಕಟ್ಟಿ ಹಾಕಿ ಬಳಿಕ ಹತ್ಯೆ ಮಾಡಿದ್ದಾರೆ. ಗರ್ಭಿಣಿ ಹಸುವಿನ, ಮಾಂಸ, ಚರ್ಮ ಹಾಗೂ ಅದರ ಕರುವಿನ ಮೃತದೇಹ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಾಂಸದ ಅಂಗಡಿಗೆ ಸಾಗಣೆ ಯತ್ನ: ಆರೋಪಿಗಳು ಸೆರೆ ಸಿಕ್ಕ ಸಮಯದಲ್ಲಿ ಹಸು ಹತ್ಯೆ ಮಾಡಿ ಮಾಂಸದ ಅಂಗಡಿಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ಕುರಿತು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆಟೋ ಜಪ್ತಿ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.