ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಗಂಭೀರ ಚರ್ಚೆ ನಡೆಯಲಿದೆ. ಎರಡನೇ ಅಲೆಯು ಇನ್ನೂ 30-40 ದಿನ ಇರಲಿದೆ ಎಂದು ತಜ್ಞರು ಹೇಳಿರುವ ಕಾರಣ ಮುಂದಿನ ಕ್ರಮದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.
ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸ್ಪೋಟವಾಗುತ್ತಿರುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ಆಗಲಿದೆ. ರಾಜ್ಯಾದ್ಯಂತ ಕೆಲವು ಹೆಚ್ಚು ಸೋಂಕಿತ ಜಿಲ್ಲೆಗಳು ಹಾಗೂ ಬೆಂಗಳೂರಿನಲ್ಲಿ 20 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಕಠಿಣ ತೀರ್ಮಾನ ತೆಗೆದುಕೊಳ್ಳಬೇಕು. ಸಂಪುಟ ಸಹೋದ್ಯೋಗಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಮೊದಲನೇ ಅಲೆಗಿಂತ ಎರಡನೇ ಅಲೆಯಲ್ಲಿ ಹೆಚ್ಚು ಸೋಂಕಿತರಾಗಿದ್ದಾರೆ. ನೆರೆಯ ರಾಜ್ಯದ ವಿಚಾರಗಳ ಬಗ್ಗೆ ಗಮನದಲ್ಲಿಟ್ಟುಕೊಂಡಿದ್ದೇವೆ. ಕೋವಿಡ್ ಹಿನ್ನೆಲೆ ಕೈಗೊಳ್ಳಬೇಕಾದ ಕ್ರಮಗಳ ಅನಿವಾರ್ಯತೆ ಕಂಡಿದ್ದೇವೆ. ಕ್ಯಾಬಿನೆಟ್ನಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ರಾಜಕೀಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.
ಕೆಲವರ ಆತಂಕ ನಮಗೂ ತಿಳಿದಿದೆ. ರೋಗದ ಲಕ್ಷಣ ಇಲ್ಲದಿದ್ದರೂ ಪಾಸಿಟಿವ್ ಬಂದ ಕೂಡಲೇ ಆಸ್ಪತ್ರೆಗೆ ಧಾವಿಸಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚಿನ ಹೊರೆ ಬೀಳುವಂತೆ ಮಾಡಿದೆ. ರೋಗದ ಲಕ್ಷಣ ಇಲ್ಲದ ಸೋಂಕಿತರು ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯಬೇಕು. ಹೆಚ್ಚಿನ ಚಿಕಿತ್ಸೆ ಬೇಕಿರುವವರು ಮಾತ್ರ ಆಸ್ಪತ್ರೆಗೆ ಬಂದರೆ ಬಿಕ್ಕಟ್ಟು ಕಡಿಮೆ ಆಗಲಿದೆ ಎಂದು ಹೇಳಿದರು.
ಆಕ್ಸಿಜನ್ ಸಿಗಲಿದೆ, ಯಾರೂ ಅನಗತ್ಯವಾಗಿ ಆಘಾತಕ್ಕೆ ಒಳಗಾಗಬೇಡಿ. ಪಾಸಿಟಿವ್ ಬಂದ ಕೂಡಲೆ ಹೆದರುತ್ತಿದ್ದೀರಿ. ಇದು ಗಂಭೀರ ಪ್ರಮಾಣದ ಸೋಂಕು ಅಲ್ಲ ಎಂದು ಐಸಿಎಂಆರ್, ಅಮೆರಿಕ ವೈದರು ಹೇಳಿದ್ದಾರೆ. ಕೆಮ್ಮು, ನೆಗಡಿ ಕೆಮ್ಮಿನ ರೀತಿ ಸಾಮಾನ್ಯ ಸೋಂಕು. ನಾವು ಎರಡನೇ ಅಲೆಯಲ್ಲಿದ್ದೇವೆ, ಬೇರೆ ದೇಶದವರು ನಾಲ್ಕನೇ ಹಂತದಲ್ಲಿದ್ದಾರೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಬರೋದು ಬೇಡ. ಒಂದು ಅಲೆ 90 ದಿನಗಳವರೆಗೂ ಇರಲಿದೆ. ಇನ್ನೂ 40 ದಿನ ಎರಡನೇ ಅಲೆ ನಮ್ಮಲ್ಲಿ ಇರಲಿದೆ ಅಂತ ತಜ್ಞರು ಹೇಳಿದ್ದಾರೆ. ಅಲ್ಲಿಯವರೆಗೂ ಮನೆಯಲ್ಲೇ ಇರೋದು ಸೂಕ್ತ ಎಂದು ತಿಳಿಸಿದರು.
ಕೋಲಾರದಲ್ಲಿ ಆಕ್ಸಿಜನ್ ಇಲ್ಲದೆ ಸಾವನ್ನಪ್ಪಿರೋ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಈಗಾಗಲೇ ಕಾಲ್ ಸೆಂಟರ್ ಮಾಡಿ ಆಕ್ಸಿಜನ್, ರೆಮಿಡಿಸಿವಿರ್ ನೀಡಲು ಐಎಎಸ್ ಅಧಿಕಾರಿ ನೇಮಿಸಲಾಗಿದೆ. ಡೆತ್ ಆಡಿಟ್ ಬಂದ ಮೇಲೆ ಈ ಬಗ್ಗೆ ಮಾತನಾಡುತ್ತೇನೆ. ಸರ್ಕಾರದ ಸ್ಟೋರ್ಸ್‌ನಲ್ಲಿ 26 ಸಾವಿರ ರೆಮಿಡಿಸಿವಿರ್ ಬೇಕು. ಯಾರಾದರೂ ದುರುದ್ದೇಶದಿಂದ ರೆಮಿಡಿಸಿವಿರ್ ಸಂಗ್ರಹ ಮಾಡಿಕೊಂಡು, ಕೃತಕ ಅಭಾವ ಸೃಷ್ಟಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು
ಗೃಹ ಇಲಾಖೆಗೆ ಮನವಿ ಮಾಡಿದ್ದು, ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ: ನಮ್ಮಲ್ಲಿ ಹಾಸಿಗೆ, ವೆಂಟಿಲೇಟರ್ ಫುಲ್ ಆಗಿವೆ: ಫಲಕ ಹಾಕಿದ ಕೆ.ಆರ್.ಆಸ್ಪತ್ರೆ