ಬೆಂಗಳೂರು: ಕಳೆದೆರಡು ದಿನಗಳಿಂದ ವ್ಯಕ್ತಿಯೋರ್ವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಕೋವಿಡ್ ಇರುವುದು ದೃಢಪಟ್ಟಿತ್ತು. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಪರದಾಡಿದ್ದಾರೆ.
ಬನಶಂಕರಿ ಮೂಲದ ವ್ಯಕ್ತಿ ಕಳೆದೆರಡು ದಿನಗಳಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದು, ಸ್ವತಃ ಅವರೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡಾಗ ಸೋಂಕು ಇರುವುದು ದೃಢಪಟ್ಟಿತ್ತು. ಈ ವಿಷಯ ತಿಳಿದ ಕುಟುಂಬಸ್ಥರು ಆಂಬ್ಯಲೆನ್ಸ್ ಸೇರಿದಂತೆ ಹೆಲ್ಪ್ಲೈಗೆ ಕರೆ ಮಾಡಿದ್ದರು. ಆದರೆ ಸಿಬ್ಬಂದಿ ರೋಗಿಯನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸುತ್ತಾಡಿಸಿ ನಡುರಾತ್ರಿಯಲ್ಲಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದರಂತೆ. ಇವರನ್ನು ನೋಡಿದ ಸ್ವಯಂ ಸೇವಾ ಸಂಸ್ಥೆಯವರು ವ್ಯಕ್ತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟು ಬಂದಿದ್ದರು.
ಇತ್ತ ವಿಷಯ ತಿಳಿದ ಬಿಬಿಎಂಪಿ ಆಂಬ್ಯುಲೆನ್ಸ್ ಸಿಬ್ಬಂದಿ ರೋಗಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಯಾವುದೇ ಮಾಹಿತಿ ನೀಡದೆ ಗೇಟ್ ಬಳಿಯೇ ಬಿಟ್ಟು ತೆರಳಿದ್ದಾರೆ. ಸಿಬ್ಬಂದಿಯ ಬೇಜವಾಬ್ದಾರಿತನದಿಂದ ಸೋಂಕಿತ ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು. ಕೊನೆಗೆ ಎಚ್ಚೆತ್ತ ಆಸ್ಪತ್ರೆ ಅಧಿಕಾರಿಗಳು ವ್ಯಕ್ತಿಯನ್ನು ವಾರ್ಡ್ಗೆ ಸೇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.