ಬೆಂಗಳೂರು: ಕಳೆದ ಐದು ದಿನದ ಅವಧಿಯಲ್ಲಿ 242 ಮಕ್ಕಳಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ. ಆದರೆ ಇದು ಶೇ.5ಕ್ಕಿಂತ ಕಡಿಮೆ ಇದೆ. ಅಲ್ಲದೆ ಕಳೆದ ವರ್ಷ ಮಕ್ಕಳಲ್ಲಿ ಕೋವಿಡ್ ಹರಡುತ್ತಿದ್ದ ಪ್ರಮಾಣದಲ್ಲಿಯೇ ಈ ವರ್ಷವೂ ಹರಡುತ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ಏರಿಕೆಯಾಗಿಲ್ಲ ಎಂದು ಬಿಬಿಎಂಪಿ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಪ್ರತಿಕ್ರಿಯಿಸಿ, ವಯಸ್ಕರು ಹಾಗೂ ಮಕ್ಕಳಲ್ಲಿ ಕಂಡು ಬರುತ್ತಿರುವ ಕೋವಿಡ್ ಬಗ್ಗೆ ಎಲ್ಲಾ ಅಂಕಿ-ಅಂಶಗಳನ್ನು ಬಹಳ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಕಳೆದ ವರ್ಷ ಮಕ್ಕಳಲ್ಲಿ ಕಂಡು ಬರುತ್ತಿದ್ದ ಕೋವಿಡ್ ಪ್ರಮಾಣವೇ ಈ ಬಾರಿಯೂ ಇದೆ, ಹೆಚ್ಚಳ ಆಗಿಲ್ಲ. ಹೆಚ್ಚಳ ಆದರೂ ಕ್ರಮ ಕೈಗೊಳ್ಳಲು ಪಾಲಿಕೆ ಸಿದ್ಧವಾಗಿದೆ ಎಂದರು.
ಎಲ್ಲಾ ಸಮುದಾಯ, ಎಲ್ಲಾ ವಯಸ್ಸಿನ ಜನರಲ್ಲೂ ಕೋವಿಡ್ ಬಾರದಂತೆ ನಿಯಂತ್ರಣ ಮಾಡುವುದು ನಮ್ಮ ಕರ್ತವ್ಯ. ಪೋಷಕರು ಹೆಚ್ಚಿನ ಜಾಗರೂಕತೆ ವಹಿಸಿದರೆ, ಮಕ್ಕಳೂ ಸಹ ಸುರಕ್ಷಿತವಾಗಿರುತ್ತಾರೆ. ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಹಾಗಿಲ್ಲ. ಪೋಷಕರು ಲಸಿಕೆ ಪಡೆಯಬೇಕು. ಮಕ್ಕಳಿಗೆ ಶಾಲೆ ಇಲ್ಲದಿದ್ದರೂ, ಕೋವಿಡ್ ಸಂಪರ್ಕಿತರ ಸಂಪರ್ಕದಿಂದ ಕೋವಿಡ್ ಬರುತ್ತಿದೆ. ಮಕ್ಕಳು ತಪ್ಪದೇ ಮಾಸ್ಕ್ ಹಾಕಬೇಕು ಎಂದು ಸಲಹೆ ನೀಡಿದರು.
ನಾಗರಪಂಚಮಿ ಹಬ್ಬದಲ್ಲಿ ಜನರ ನಿಯಂತ್ರಣ ಹೇಗೆ?
ಈಗಾಗಲೇ ಜಿಲ್ಲಾಡಳಿತ ಮುಜರಾಯಿ ಇಲಾಖೆ ಹಾಗೂ ಖಾಸಗಿ ದೇವಾಲಯಗಳಲ್ಲಿ ಜನದಟ್ಟಣೆ ನಿಯಂತ್ರಣದ ಹಿನ್ನೆಲೆ ಅಗತ್ಯ ಮಾರ್ಗಸೂಚಿ ಹೊರಡಿಸಿದೆ. ಶನಿವಾರ ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನದಂದು ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲ. ಆದರೆ ನಾಳೆ ನಾಗರಪಂಚಮಿ ಹಬ್ಬ ಇದ್ದು, ನಾಳೆ ದೇವಾಲಯಕ್ಕೆ ಭಕ್ತರು ಪ್ರವೇಶ ಮಾಡುವ ಬಗ್ಗೆ ಸ್ಪಷ್ಟ ನಿರ್ದೇಶನಗಳಿಲ್ಲ. ಕೋವಿಡ್ ಇರುವ ಹಿನ್ನೆಲೆ ಬಿಬಿಎಂಪಿಯೂ ಅಧಿಕಾರಿಗಳ ಸಮನ್ವಯದೊಂದಿಗೆ ಜನದಟ್ಟಣೆ ನಿಯಂತ್ರಿಸಲಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.