ಬೆಂಗಳೂರು: ಕೋವಿಡ್ ಸೋಂಕಿತರು ಬೆಡ್ ಗಾಗಿ ಆಸ್ಪತ್ರೆಗಳಿಗೆ ಅಲೆದಾಡಬೇಕಿಲ್ಲ, ಸಹಾಯವಾಣಿಯ ಸಹಾಯಕ್ಕೆ ಕಾಯಬೇಕಿಲ್ಲ. ಕೋವಿಡ್ ಆರೈಕೆ ಕೇಂದ್ರಗಳಿಗೆ ಯಾವುದೇ ಕಾಯ್ದಿರಿಸುವ ಪ್ರಕ್ರಿಯೆ ಇಲ್ಲದೇ ನೇರವಾಗಿ (Walk-in ಮೂಲಕ) ದಾಖಲಾಗಬಹುದು ಎಂದು ಬಿಬಿಎಂಪಿ ತಿಳಿಸಿದೆ.
ಓದಿ: ಲಸಿಕೆ ಹಾಕಿಸಿಕೊಳ್ಳಲು ಹೋಗ್ತಾ ಇದ್ದೇನೆ: ಬೈಕ್ ಮುಂದೆ ಬೋರ್ಡ್ ಹಾಕಿಕೊಂಡ ಸವಾರ
ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ 11 ಕೋವಿಡ್ ಆರೈಕೆ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ. ಈ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಒಟ್ಟು 1,635 ಹಾಸಿಗೆಗಳ ವ್ಯವಸ್ಥೆಯಿದ್ದು, ಸೋಂಕಿತರಿಗೆ ಏಕಕಾಲದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ನಗರದಲ್ಲಿರುವ ಕೋವಿಡ್ ಅರೈಕೆ ಕೇಂದ್ರಗಳನ್ನು ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ಪೋರ್ಟಲ್‌ನಲ್ಲಿ ಅಳವಡಿಸಿದ್ದು, ಹಾಸಿಗೆಯನ್ನು ಆನ್‌ಲೈನ್ ಮೂಲಕ ಕಾಯ್ದಿರಿಸಿ ಕೋವಿಡ್ ಆರೈಕೆ ಕೇಂದ್ರಕ್ಕೆ ಬಂದು ದಾಖಲಾಗಬಹುದಾಗಿದೆ. ಇದರ ಜೊತೆಗೆ ಕಾಯ್ದಿರಿಸುವ ಪ್ರಕ್ರಿಯೆ ಇಲ್ಲದೇ ನೇರವಾಗಿ (Walk-in ಮೂಲಕ) ಕೋವಿಡ್ ಆರೈಕೆ ಕೇಂದ್ರಕ್ಕೆ ಬಂದು ದಾಖಲಾಗಬಹುದಾಗಿದೆ. ನೇರವಾಗಿ ಬರುವವರಿಗೆ ಕೋವಿಡ್ ಆರೈಕೆ ಕೇಂದ್ರದಲ್ಲೇ ಇರುವ ಟ್ರಯಾಜ್ ಸೆಂಟರ್ ಮೂಲಕ ವೈದ್ಯರು ಟ್ರಯಾಜಿಂಗ್ ಮಾಡಿ ಆರೋಗ್ಯ ವಿಚಾರಿಸಿ ದಾಖಲಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಸಿಸಿಸಿ ಕೇಂದ್ರಗಳ ಬಗ್ಗೆ ಕೋವಿಡ್ ಸೋಂಕಿತರು ಕೇಂದ್ರ ಕಚೇರಿಯ ಕೋವಿಡ್ ಆರೈಕೆ ಕೇಂದ್ರ ಸಹಾಯವಾಣಿ ಸಂಖ್ಯೆ 080-22493200 ಅಥವಾ 080-22493201ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಅಥವಾ 11 ಕೋವಿಡ್ ಆರೈಕೆ ಕೇಂದ್ರಗಳಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದ್ದು, ಪ್ರತಿ ಕೇಂದ್ರಕ್ಕೂ ಸಂಪರ್ಕ ಸಂಖ್ಯೆಯ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಯೂ ಕಾರ್ಯನಿವರ್ಹಿಸಲಿದೆ ಎಂದರು, ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿರುತ್ತದೆ.