ಬೆಂಗಳೂರು: ಶಬರಿಮಲೆ ತೆರಳುವ ರಾಜ್ಯದ ಭಕ್ತರಿಗೆ ಕೇರಳ ಸರ್ಕಾರವು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಕೋವಿಡ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಭಕ್ತರು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದೆ.
ಭಕ್ತರ ಆರೋಗ್ಯದ ಹಿತದೃಷ್ಠಿಯಿಂದ ಕೆಲವು ಸೂಚನೆ ನೀಡಿದ್ದು, ಮೊದಲು ಎಲ್ಲಾ ಯಾತ್ರಾರ್ಥಿಗಳು ಶಬರಿಮಲೆ ಜಾಲತಾಣದ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಪ್ರಥಮವಾಗಿ ಕೇವಲ ಒಂದು ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ಇದ್ದು, ವಾರಾಂತ್ಯದಲ್ಲಿ ಎರಡು ಸಾವಿರ ಯಾತ್ರಾರ್ಥಿಗಳಿಗೆ ಅವಕಾಶ ಇರುತ್ತದೆ. ಮೊದಲು ನೋಂದಣಿ ಮಾಡಿದವರಿಗೆ ಆದ್ಯತೆ ಇರಲಿದೆ.
ಭೇಟಿ ನೀಡುವ 48 ಗಂಟೆ ಮೊದಲು ಕೋವಿಡ್ ಪರೀಕ್ಷೆ ಕಡ್ಡಾಯವಾಗಿದ್ದು, ಸ್ಥಳದಲ್ಲಿಯೇ ಪರೀಕ್ಷೆ ಮಾಡಲಾಗುತ್ತಿದೆ. ಪರೀಕ್ಷೆ ವೆಚ್ಚವನ್ನು ಯಾತ್ರಾರ್ಥಿಗಳೇ ಭರಿಸಬೇಕು. 10 ವರ್ಷದ ಒಳಗಿನ 60ರಿಂದ 65 ವರ್ಷ ಮೇಲಿನ ಯಾತ್ರಾರ್ಥಿಗಳಿಗೆ ಹಾಗೂ ಕೋವಿಡ್ ಲಕ್ಷಣ ಇರುವವರಿಗೆ ಪ್ರವೇಶ ನಿಷೇಧಿಸಲಾಗಿದೆ.
ಬಿಪಿಎಲ್ ಹಾಗೂ ಆಯುಷ್ಮಾನ್ ಕಾರ್ಡ್ ಹೊಂದಿರುವವವರು ಯಾತ್ರೆಯ ಸಮಯದಲ್ಲಿ ಅವುಗಳನ್ನು ತೆಗೆದುಕೊಂಡು ಹೋಗಬೇಕು. ತುಪ್ಪದ ಅಭಿಷೇಕ, ಪಂಪಾ ನದಿ ಸ್ನಾನ, ಸನ್ನಿಧಾನದಲ್ಲಿ ರಾತ್ರಿ ತಂಗುವುದು, ಪಂಪಾ ಮತ್ತು ಗಣಪತಿ ಕೋವಿಲ್ಗೆ ಅವಕಾಶ ಇರುವುದಿಲ್ಲ. ಯಾತ್ರಿಗಳು ಎರುಮೆಲು ಮತ್ತು ವೇದಸಾರಿಕ್ಕರ ಮೂಲಕ ಮಾತ್ರ ಪ್ರಯಾಣಕ್ಕೆ ಅವಕಾಶವಿರುವುದಾಗಿ ಸೂಚಿಸಲಾಗಿದೆ.