ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಕೋವಿಡ್ ಕರಿಛಾಯೆ ಎಲ್ಲೆಡೆ ಹಬ್ಬುವ ಲಕ್ಷಣಗಳು ಕಾಣುತ್ತಿವೆ. ಇತ್ತೀಚೆಗೆ ದಿನಕ್ಕೆ ನೂರರ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದ ಸೋಂಕಿತರ ಪ್ರಮಾಣ ಇದೀಗ ಸಾವಿರದತ್ತ ಹೆಜ್ಜೆಯಿಟ್ಟಿದೆ. ನಿನ್ನೆ ಒಂದೇ ದಿನ 1,135 ಮಂದಿಗೆ ಸೋಂಕು ತಗುಲಿರುವುದು ದೃಢವಾಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಏರಿಕೆ ಕಾಣುತ್ತಿರುವ ಸೋಂಕು ಪ್ರಕರಣಗಳು:
ಕೋವಿಡ್ನ ಮೊದಲ ಅಲೆಯಲ್ಲಿ ಅಂದರೆ, 2020ರ ಜೂನ್ 26ರಂದು ಮೊದಲ ಬಾರಿಗೆ 1,267 ಮಂದಿಗೆ ಸೋಂಕು ತಗುಲಿತ್ತು. ಬಳಿಕ ಸಾವಿರದ ಸಂಖ್ಯೆ ಹತ್ತು ಸಾವಿರ ಗಡಿದಾಟಿ ಲಕ್ಷದತ್ತ ಹೋದದ್ದು ಇದೀಗ ಇತಿಹಾಸ. ಕಳೆದ ವರ್ಷ ಡಿಸೆಂಬರ್ 25 ರಂದು 1,005 ಪ್ರಕರಣಗಳು ಕಾಣಿಸಿಕೊಂಡ ಬಳಿಕ ನಿಧಾನಗತಿಯಲ್ಲಿ ಸೋಂಕು ಪ್ರಕರಣಗಳು ಇಳಿಕೆ ಕಂಡಿದ್ದವು. ಜನವರಿ- ಫೆಬ್ರವರಿಯ ಅಂತ್ಯದವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 500ರೊಳಗೆ ಇತ್ತು. ಆದರೆ, ಮಾರ್ಚ್ನ ಎರಡನೇ ವಾರದಿಂದ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು, ಇದೀಗ ಹಿಸ್ಟರಿ ಮತ್ತೆ ರಿಪೀಟ್ ಆಗುವ ಲಕ್ಷಣಗಳಾಗಿವೆ. ಅದರಲ್ಲೂ ಬೆಂಗಳೂರೇ ಕೊರೊನಾ ಹಾಟ್ ಸ್ಪಾಟ್ ಆಗಿದ್ದು, ಇದೀಗ ಇನ್ನಷ್ಟು ಮುನ್ನೆಚ್ಚರಿಕೆ ಅಗತ್ಯವಾಗಿದೆ.
ರಾಜ್ಯ ರಾಜಧಾನಿಯಲ್ಲಿನ ಸೋಂಕಿತರ ಪ್ರಮಾಣ:
ರಾಜ್ಯ ರಾಜಧಾನಿಯಲ್ಲಿ ನಿನ್ನೆ ಒಂದೇ ದಿನ 710 ಹೊಸ ಪ್ರಕರಣಗಳು ಪತ್ತೆಯಾಗಿದೆ. ಫೆಬ್ರವರಿ ಇಡೀ ತಿಂಗಳು ದಾಖಲಾಗಿದ್ದ ಕೇಸ್ಗಳು ಮಾರ್ಚ್ನ ಅರ್ಧ ತಿಂಗಳಲ್ಲೇ ದಾಖಲಾಗಿದೆ. ಕ್ಲಸ್ಟರ್ ಪ್ರಕರಣಗಳು ಮಾತ್ರ ಅಲ್ಲ, ಮನೆ ಮನೆಗಳಲ್ಲೂ ಸೋಂಕು ಕಾಣಿಸಿಕೊಳ್ತಿದೆ. ಫೆಬ್ರವರಿ ತಿಂಗಳಲ್ಲಿ ಪಾಸಿಟಿವ್ ರೇಟ್ 0.94 ರಷ್ಟು ಇದಿದ್ದು ಮಾರ್ಚ್ನಲ್ಲಿ 1.26 ರಷ್ಟು ಇದೆ. ಮಾರ್ಚ್ 12 ರಿಂದ 500ರ ಗಡಿದಾಟಿದ ಸೋಂಕಿತರ ಸಂಖ್ಯೆ ಇದೀಗ 700ಕ್ಕೆ ತಲುಪಿದೆ
ಬೆಂಗಳೂರಿನ ಸೋಂಕಿತರ ಮತ್ತು ಮೃತರ ಮ್ರಮಾಣ:
- ಮಾರ್ಚ್ 12- 526ಕೇಸ್- 2 ಸಾವು
- ಮಾರ್ಚ್ 13 -630 ಕೇಸ್- 0 ಸಾವು
- ಮಾರ್ಚ್ 14- 628ಕೇಸ್- 3 ಸಾವು
- ಮಾರ್ಚ್ 15-550 ಕೇಸ್- 5 ಸಾವು
- ಮಾರ್ಚ್ 16- 710ಕೇಸ್- 3 ಸಾವು
ಇದನ್ನೂ ಓದಿ: Karnataka Covid Update: ಇಂದು ಸಾವಿರ ದಾಟಿದ ಸೋಂಕಿತರ ಸಂಖ್ಯೆ; 6 ಮಂದಿ ಬಲಿ
ಕೊರೊನಾ ಮೊದಲ ಅಲೆಗೆ ತತ್ತರಿಸಿ ಹೋಗಿದ್ದ ಬೆಂಗಳೂರಿನ ಸ್ಲಂಗಳು, ಇದೀಗ ಎರಡನೇ ಅಲೆಯಿಂದ ಬಚಾವ್ ಆಗ್ತಾವಾ ಎಂಬ ಪ್ರಶ್ನೆ ಕಾಡಿದೆ. ಡಿಜೆಹಳ್ಳಿ ಸ್ಲಂ, ಸಿದ್ದಾಪುರ ಸ್ಲಂ, ಮಂಗಮ್ಮನ ಪಾಳ್ಯ, ರಾಗಿ ಗುಡ್ಡ, ಶಿವಾಜಿನಗರ, ರಾಯಪುರ ಸೇರಿದಂತೆ ಜಗಜೀವನ್ ರಾಮ್ ನಗರ, ಲಕ್ಷ್ಮೀದೇವಿ ನಗರ ಹೀಗೆ ಅನೇಕ ಪ್ರದೇಶಗಳಲ್ಲಿ ಕೊರೊನಾ ಆರ್ಭಟಿಸಿತ್ತು. ಆದರೆ, ಬೆಂಗಳೂರಿನ ಸ್ಲಂಗಳಲ್ಲಿ ಹತ್ತು ದಿನಗಳಿಂದ ಶೂನ್ಯ ಪ್ರಕರಣಗಳು ದಾಖಲಾಗಿದೆ. ಬಹುತೇಕ ಸ್ಲಂಗಳಲ್ಲಿ ಸೋಂಕಿನ ಪ್ರಮಾಣ ಅತ್ಯಂತ ಕಡಿಮೆ ಇದ್ದು, ಹರ್ಡ್ ಇಮ್ಯುನಿಟಿ ಬೆಳೆದಿದೆ.
ಎರಡನೇ ಅಲೆಗೆ ಸ್ಲಂಗಳು ಸೇಫ್?
ಕಳೆದ ಹತ್ತು ದಿನಗಳಲ್ಲಿ ಐದು ವಾರ್ಡ್ಗಳಲ್ಲಿ ಶೂನ್ಯ ಕೊರೊನಾ ಪ್ರಕರಣ ದಾಖಲಾಗಿದೆ. ವಾರ್ಡ್ ನಂಬರ್ 42 ಲಕ್ಷ್ಮಿದೇವಿನಗರ, 122 ಕೆ ಪಿ ಅಗ್ರಹಾರ, 136 ಜೆ ಜೆ ನಗರ, 137 ರಾಯಪುರ, 49 ಲಿಂಗರಾಜಪುರ ವಾರ್ಡ್ ನಲ್ಲಿ ಶೂನ್ಯ ಕೇಸ್ ದಾಖಲಾಗಿದೆ. ಅಪಾರ್ಟ್ಮೆಂಟ್ಗಳಲ್ಲಿ ಸೋಂಕು ಹೆಚ್ಚಳವಾಗಿದ್ದು, ಇದರಿಂದ ಇತರೆಡೆ ಹರಡುವ ಸಾಧ್ಯತೆ ಇದೆ. ಹಾಗಾಗಿ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ.