ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯ ಕಮಾಂಡ್ ಆಸ್ಪತ್ರೆ ಬಳಿ ಇರುವ ಸೇನೆಗೆ ಸೇರಿದ ಎಎಸ್‌ಸಿ ಕೇಂದ್ರ ಮತ್ತು ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗುತ್ತಿದೆ.
ಈ ಕುರಿತು ಎಎಸ್‌ಸಿ ಕಮಾಂಡರ್ ಲೆಫ್ಟಿನೆಂಟ್ ಬಿ.ಕೆ. ರೆಸ್‌ಪಾಸ್ ವಾಲ್ ಅವರ ಜತೆ ಡಿಸಿಎಂ ಅಶ್ವತ್ಥ್ ನಾರಾಯಣ ಮಾತುಕತೆ ನಡೆಸಿದರು. ಎಎಸ್‌ಸಿ ಸೆಂಟರ್‌ನಲ್ಲಿ ಕೊನೆಪಕ್ಷ 500 ಬೆಡ್‌ಗಳ ಕೋವಿಡ್ ಕೇಂದ್ರ ಸ್ಥಾಪನೆಯ ಪ್ತಸ್ತಾಪನೆಯನ್ನು ಮುಂದಿಟ್ಟರಲ್ಲದೆ, ಈ ಕೋವಿಡ್ ಕೇರ್ ಸೆಂಟರ್ಗೆ ಅಗತ್ಯವಾದ ಮೂಲಸೌಕರ್ಯವನ್ನು ಸರ್ಕಾರ ಒದಗಿಸಲಿದೆ. ಸೇನೆ ವತಿಯಿಂದ ವೈದ್ಯರು, ಸಿಬ್ಬಂದಿ ಮತ್ತು ಅರೆವೈದ್ಯ ಸಿಬ್ಬಂದಿಯನ್ನು ಒದಗಿಸುವಂತೆ ಕೋರಿದರು. ಎರಡನೇ ಮತ್ತು ಮೂರನೇ ಅಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಅವಕಾಶ ನೀಡಬೇಕು. ವಿವಿಧ ಹಂತಗಳಲ್ಲಿ ಇಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಬಹುದು ಎಂದರು.
ಇದಕ್ಕೆ ಬಿ.ಕೆ. ರೆಸ್‌ಪಾಸ್ ವಾಲ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರಲ್ಲದೆ, ಕೋವಿಡ್ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಸೇನೆಯೂ ಹೆಗಲು ಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಎಸ್‌ಸಿ ಕೇಂದ್ರದಲ್ಲಿ ಕೋವಿಡ್ ಚಿಕಿತ್ಸೆಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಲೆಫ್ಟಿನೆಂಟ್ ಬಿ.ಕೆ. ರೆಸ್‌ಪಾಸ್ ವಾಲ್ ಅವರು ಡಿಸಿಎಂ ಅವರಿಗೆ ಮಾಹಿತಿ ನೀಡಿದರಲ್ಲದೆ, ಆ ಸೌಲಭ್ಯಗಳನ್ನು ತೋರಿಸಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಡಿಸಿಎಂ ಕಾರ್ಯದರ್ಶಿ ಪ್ರದೀಪ್ ಪ್ರಭಾಕರ್, ಭಾರತ್ ಸ್ಕೌಟ್ಸ್ & ಗೈಡ್ಸ್‌ನ ರಾಜ್ಯ ಸರ್ಕಾರದ ಸಲಹೆಗಾರರಾದ ಜಿ.ಎಂ. ಬಾಬು ಮುಂತಾದವರು ಇದ್ದರು.