ಬೆಂಗಳೂರು: ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರೋಗಿಗಳಿಗೆ ಸೂಕ್ತ ರೀತಿಯ ಆರೈಕೆ, ಹಾಸಿಗೆಗಳ ಕೊರತೆ ಎದುರಾಗದಂತೆ ಕ್ರಮ ಕೈಗೊಳ್ಳುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು.
ಸರ್ಕಾರಿ ನಿವಾಸ ಕಾವೇರಿಯಲ್ಲಿ ಬೆಳಗ್ಗೆಯೇ ಸಭೆ ನಡೆಸಿದ ಸಿಎಂ, ಕೋವಿಡ್ ಕೇರ್ ಸೆಂಟರ್ ನಿರ್ವಹಣೆ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಜಿಕೆವಿಕೆ, ಹಜ್ ಭವನ, ರವಿಶಂಕರ ಗುರೂಜಿ ಆಶ್ರಮದಲ್ಲಿ ಈಗಾಗಲೇ ಕೋವಿಡ್ ಕೇರ್ ಕೇಂದ್ರಗಳು ಆರಂಭಗೊಂಡಿದ್ದು, ಅಲ್ಲಿನ ನಿರ್ವಹಣೆ, ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.
ಕೋರಮಂಗಲದ ಒಳಾಂಗಣ ಕ್ರೀಡಾಂಗಣ, ಸರ್ಕಾರಿ ಆಯುರ್ವೇದ ಕಾಲೇಜು ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಸಿದ್ಧಗೊಳ್ಳುತ್ತಿರುವ ಬಗ್ಗೆ ಸಮಗ್ರ ಮಾಹಿತಿ ಪಡೆದರು. ಯಾವ ಕ್ಷಣದಲ್ಲೇ ಆಗಲಿ ಸೋಂಕಿತರು ದಾಖಲಾದರೂ ದಾಖಲಿಸಿಕೊಂಡು ಚಿಕಿತ್ಸೆಗೆ ಸಜ್ಜಾಗುವಂತೆ ಸೂಚನೆ ನೀಡಿದರು.
ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಕೋವಿಡ್ ಕೇರ್ ಸೆಂಟರ್‌ನಲ್ಲಿ 100 ಐಸಿಯು ಬೆಡ್ ಸೇರಿ 10 ಸಾವಿರ ಬೆಡ್ ವ್ಯವಸ್ಥೆ ಇರುವ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್ ಆಗಲಿದೆ ಎನ್ನುವ ಮಾಹಿತಿಗೆ ಸಂತಸ ವ್ಯಕ್ತಪಡಿಸಿದ ಸಿಎಂ, ಕೂಡಲೇ ಸಿದ್ಧವಾಗಿರುವಷ್ಟು ಹಾಸಿಗೆಯೊಂದಿಗೆ ಸೆಂಟರ್ ಆರಂಭಿಸಲು ತಿಳಿಸಿದರು.
ಎಸಿಂಪ್ಟಮ್ಯಾಟಿಕ್ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅಗತ್ಯ ಬಿದ್ದರೆ ಇತರೆಡೆ ಇರುವ ಎಸಿಂಪ್ಟಮ್ಯಾಟಿಕ್ ಸೋಂಕಿತರನ್ನೂ ಇಲ್ಲಿಗೆ ಸ್ಥಳಾಂತರ ಮಾಡಲಾಗುತ್ತದೆ. ಇವರ ಹಾರೈಕೆಗೆ ವೈದ್ಯರ ಬದಲ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ವೈದ್ಯರು, ನರ್ಸ್ಗಳು ಎಸಿಂಪ್ಟಮ್ಯಾಟಿಕ್ ಸೋಂಕಿತರನ್ನು ಆರೈಕೆ ಮಾಡಲು ಗಮನ ಹರಿಸಲಿದ್ದಾರೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ಕೋವಿಡ್ ನಿರ್ವಹಣೆ ಬಗ್ಗೆ ಎಲ್ಲಾ ಮಾಹಿತಿ ಪಡೆದ ಸಿಎಂ, ಯಾವುದೇ ಲೋಪದೋಷಗಳಾಗದಂತೆ ಮುನ್ನೆಚ್ಚರಿಕೆವಹಿಸಿ ಕೋವಿಡ್ ಕೇರ್ ಸೆಂಟರ್ ಕೆಲಸ ಮಾಡುವಂತೆ ನೋಡಿಕೊಳ್ಳಿ ಎಂದು ನಿರ್ದೇಶನ ನೀಡಿದರು.
ಡಿಸಿಎಂ ಡಾ.ಅಶ್ವತ್ಥ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಹಾಗು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.