ಬೆಂಗಳೂರು: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಎಲ್ಲೆಡೆ ಕೋವಿಡ್ ಭೀತಿ ಶುರುವಾಗಿದ್ದು, ಇದರಿಂದ ಜೈಲುಗಳು ಹೊರತಾಗಿಲ್ಲ. ಜೈಲಿಗೆ ಆರೋಪಿಗಳನ್ನ ಕಳುಹಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಸದ್ಯ ಪ್ರಮುಖ ಜೈಲಾಗಿರುವ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ 3,500 ಕೈದಿಗಳನ್ನು ಮಾತ್ರ ಇರಿಸಲು ಸಾಮರ್ಥ್ಯವಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಜೈಲಿನಲ್ಲಿ 5 ಸಾವಿರ ಮಂದಿಯನ್ನ ಇಡಲಾಗಿದೆ.
ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಿದ್ದು, ಹೊಸದಾಗಿ ಯಾರೆ ಬಂದರೂ ಅವರನ್ನು ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಬಂಧಿಖಾನೆ ಎಡಿಜಿಪಿ ಅಲೋಕ್ ಮೋಹನ್, ರಾಜ್ಯದಲ್ಲಿ ಒಟ್ಟು 47 ಕಾರಾಗೃಹಗಳಿದ್ದು, ಅವುಗಳಲ್ಲಿ 9 ಕೇಂದ್ರ ಕಾರಾಗೃಹ, 21 ಜಿಲ್ಲಾ ಕಾರಾಗೃಹ, ಬಯಲು ಕಾರಾಗೃಹ 1 ಹಾಗೂ 13 ತಾಲೂಕು ಹಾಗೂ 3 ಕಂದಾಯ ಕಾರಗೃಹಗಳಿದ್ದು, ಎಲ್ಲಾ ಕಾರಾಗೃಹಗಳಲ್ಲೂ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಮಾಹಿತಿ ನೀಡುತ್ತಾರೆ.
ರಾಜ್ಯ ಕಾರಾಗೃಹಗಳ ಒಟ್ಟು 14,153 ಕೈದಿಗಳು ಇದ್ದಾರೆ. ಅದರಲ್ಲಿ ವಿಚಾರಣಾಧೀನ ಕೈದಿಗಳು 10,554, ಸಜಾ ಕೈದಿಗಳು 3,599 ಮಂದಿ ಇದ್ದಾರೆ. ಇದರಲ್ಲಿ 13,565 ಪುರುಷರು, 588 ಮಂದಿ ಮಹಿಳೆಯರಿದ್ದಾರೆ. ಕೈದಿಗಳು, ಜೈಲು ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎನ್ನುತ್ತಾರೆ.
ಅಪರಾಧ ಪ್ರಕರಣಗಳು ನಡೆದಾಗ ಬಂಧಿಸುವ ಆರೋಪಿಗಳಿಗೆ ಪೊಲೀಸರೇ ಕೊರೊನಾ ಪರೀಕ್ಷೆಗೆ ಒಳಪಡಿಸುತ್ತಿದ್ದು, ನೆಗೆಟಿವ್ ಬಂದವರನ್ನ ಮಾತ್ರ ಜೈಲಿಗೆ ಕಳುಹಿಸುತ್ತಿದ್ದಾರೆ. ಒಂದು ವೇಳೆ ಪಾಸಿಟಿವ್ ಬಂದರೆ, ಅಂತವರನ್ನು ಆಸ್ಪತ್ರೆಗೆ ರವಾನೆ ಮಾಡುವ ಕಾರಣ ಸದ್ಯ ಇಲ್ಲಿಯವರೆಗೆ ಜೈಲು ಒಳಗಡೆ ಇರುವ ಕೈದಿಗಳಿಗೆ ಯಾವುದೇ ಕೊರೊನಾ ಪಾಸಿಟಿವ್ ಪತ್ತೆಯಾಗಿಲ್ಲ.
ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಸಪೇಟ್ ಮಾತನಾಡಿ, ಸದ್ಯ ಕೊರೊನಾ ಇರುವ ಕಾರಣ ಆರೋಪಿಗಳನ್ನ ಹಿಡಿದ ತಕ್ಷಣ ನಾವೇ ಕೊರೊನಾ ಟೆಸ್ಟ್ ಮಾಡಿಸಿ ನಂತರ ಜೈಲಿಗೆ ಕಳುಹಿಸುತ್ತಿದ್ದೇವೆ. ಜೈಲಿನಲ್ಲಿ ಬಹಳಷ್ಟು ಮಂದಿ ಕೈದಿಗಳಿದ್ದು, ಇತರರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.