ಶ್ರೀನಗರ: ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಮೂರನೇ ದಿನವೂ ಗದ್ದಲ, ಕೋಲಾಹಲ ಮುಂದುವರೆದಿದೆ. ವಿಶೇಷ ಸ್ಥಾನಮಾನದ ನಿರ್ಣಯವನ್ನು ವಿರೋಧಿಸಿ ಇಂದೂ ಕೂಡ ಸದನದ ಬಾವಿಗಿಳಿದು ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ದು, 12 ಶಾಸಕರನ್ನು ಸ್ಪೀಕರ್ ಸದನದಿಂದ ಹೊರ ಕಳುಹಿಸಿದ್ದಾರೆ.
ಸದನ ಆರಂಭವಾಗುತ್ತಿದ್ದಂತೆ ಸ್ಪೀಕರ್ ರಹೀಮ್ ರಾಥರ್ ನಿರ್ದೇಶನದ ಮೇರೆಗೆ ನ್ಯಾಷನಲ್ ಕಾನ್ಫರೆನ್ಸ್‌ನ ಶಾಸಕರ ಜಾವೇದ್ ಬೇಗ್, ವಂದನಾ ನಿರ್ಣಯದ ಮೇಲೆ ಮಾತನಾಡುತ್ತಿದ್ದರು. ಈ ವೇಳೆ ವಿಪಕ್ಷಗಳಾದ ಬಿಜೆಪಿ, ಪಿಸಿ, ಪಿಡಿಪಿ ಮತ್ತು ಎಐಪಿ ಶಾಸಕರು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನದ ಕುರಿತು ಅಂಗೀಕಾರವಾದ ನಿರ್ಣಯ ವಿರೋಧಿಸಿ ಪ್ರತಿಭಟನೆಗೆ ಮುಂದಾದರು. ಕೆಲವು ಶಾಸಕರು ಸದನ ಬಾವಿಯೊಳಗೆ ಜಿಗಿದು ಪ್ರತಿಭಟನೆ ನಡೆಸಿದರು.
ಸದನದಲ್ಲಿ ಕೋಲಾಹಲ ಹೆಚ್ಚುತ್ತಿದ್ದಂತೆ ಸ್ಪೀಕರ್ ಗದ್ದಲ ಸೃಷ್ಟಿಸಿದ ಸದಸ್ಯರನ್ನು ಸದನದಿಂದ ಹೊರಗೆ ಕಳುಹಿಸುವಂತೆ ಮಾರ್ಷಲ್ಗಳಿಗೆ ಸೂಚಿಸಿದರು. ಈ ವೇಳೆ ಬಿಜೆಪಿ ಶಾಸಕರು, ಪ್ರತ್ಯೇಕತೆ ಸ್ವೀಕಾರಾರ್ಹವಲ್ಲ ಎಂದು ಘೋಷಣೆ ಕೂಗುತ್ತಾ ಹೊರನಡೆದರು.
ದಶಕಗಳ ಬಳಿಕ ಆಯ್ಕೆಯಾದ ಚುನಾಯಿತ ಸರ್ಕಾರದ ಪರವಾಗಿ ಉಪ ಮುಖ್ಯಮಂತ್ರಿ ಸುರಿಂದರ್ ಚೌಧರಿ, ಮಧ್ಯಂತರ ಅಧಿವೇಶನದಲ್ಲಿ ಮಂಗಳವಾರ ವಿಶೇಷ ಸ್ಥಾನಮಾನ ಮರುಸ್ಥಾಪನೆ ಕುರಿತು ನಿರ್ಣಯ ಮಂಡಿಸಿದ್ದರು. ಈ ನಿರ್ಣಯದ ವಿರುದ್ಧ ಬಿಜೆಪಿ ಶಾಸಕರು ಪ್ರತಿಭಟಿಸುತ್ತಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಹೈಡ್ರಾಮಾ: ಸದನ ಮುಂದೂಡಿಕೆ