ಫರೀದಾಬಾದ್: ಪ್ರೇಯಸಿಯನ್ನು ಮೆಚ್ಚಿಸಲು ಆಸ್ಪತ್ರೆಗೆ ಹುಸಿ ಬಾಂಬ್ ಕರೆ ಮಾಡಿದ ಯುವಕನನ್ನು ಫರೀದಾಬಾದ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಿಹಾರದ ಪಾಟ್ನಾದವನಾಗಿದ್ದು, ತನ್ನನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸದಸ್ಯ ಎಂದು ಹೇಳಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾನೆ.
ಇಲ್ಲಿನ ಖಾಸಗಿ ಆಸ್ಪತ್ರೆಯನ್ನು ಬೆದರಿಸುವ ಸಲುವಾಗಿ 27 ವರ್ಷದ ಅಂಕಿತ್ ಪಾಸ್ವಾನ್ ಎಂಬಾತ ಅಕ್ಟೋಬರ್ 3ರಂದು ಹುಸಿ ಬಾಂಬ್ ಕರೆ ಮಾಡಿ, ಆಸ್ಪತ್ರೆಯಲ್ಲಿ ಆತಂಕ ಸೃಷ್ಟಿಸಿದ್ದ.
ಫರೀದಾಬಾದ್‌ನ ಸೆಕ್ಟರ್ 8ರಲ್ಲಿರುವ ಸರ್ವೋದಯ ಆಸ್ಪತ್ರೆಗೆ ಕರೆ ಮಾಡಿದ್ದ ಆರೋಪಿ, ಬಾಂಬ್ ಇಟ್ಟು ಸ್ಪೋಟಿಸುವ ಬೆದರಿಕೆ ಹಾಕಿದ್ದ. ಬೆದರಿಕೆ ಕರೆ ಬಂದ ಒಂದು ದಿನದ ನಂತರ ಆಸ್ಪತ್ರೆಯ ಭದ್ರತಾ ವಿಭಾಗದ ಮುಖ್ಯಸ್ಥ ಕಪಿಲ್ ಶರ್ಮಾ ಅಕ್ಟೋಬರ್ 4ರಂದು ಪೊಲೀಸರಿಗೆ ದೂರು ನೀಡಿದ್ದರು. ಬಿಎನ್ಎಸ್ ಸೆಕ್ಷನ್ 125 ಮತ್ತು 351 ಅಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆಗೆ ಸೆಕ್ಟರ್ 30 ಅಪರಾಧ ವಿಭಾಗದ ಪ್ರಭಾರಿ ಅನಿಲ್ ಕುಮಾರ್, ಸೆಕ್ಟರ್ 65 ಪ್ರಭಾರಿ ಜಗವಿಂದರ್ ಮತ್ತು ಉಂಚ ಗ್ರಾಮ ಉಸ್ತುವಾರಿ ನರೇಂದ್ರ ತಂಡದಿಂದ ಜಂಟಿ ಕಾರ್ಯಾಚರಣೆ ನಡೆಸಲಾಗಿತ್ತು.
ಈ ವೇಳೆ ಪಾಸ್ವಾನ್ ಹುಸಿ ಕರೆ ಮಾಡಿದ್ದು ಬಯಲಾಗಿದ್ದು, ನಂತರ ಆತನನ್ನು ಬಂಧಿಸಲಾಗಿದೆ. ತಾನು ಮದುವೆ ನಿಶ್ಚಯಿಸಿಕೊಂಡ ಯುವತಿಯನ್ನು ಮೆಚ್ಚಿಸಲು ಮತ್ತು ಆಕೆಯ ತಾಯಿಯ ಸಾವಿಗೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾಗಿ ವಿಚಾರಣೆ ವೇಳೆ ಆತ ಪೊಲೀಸರಿಗೆ ತಿಳಿಸಿದ್ದಾನೆ.
ತಾನು ಮದುವೆಯಾಗಲಿರುವ ಹುಡುಗಿಯ ತಾಯಿಯನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಸರ್ವೋದಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಂತರ ಅವರನ್ನು ಮತ್ತೊಂದು ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಮಹಿಳೆಗೆ ಆರಂಭದಲ್ಲಿ ಸರಿಯಾದ ಚಿಕಿತ್ಸೆಯನ್ನು ಸರ್ವೋದಯ ಆಸ್ಪತ್ರೆ ವೈದ್ಯರು ನೀಡಿಲ್ಲ ಎಂಬ ಸಿಟ್ಟಿನೊಂದಿಗೆ ಹುಡುಗಿಯನ್ನು ಮೆಚ್ಚಿಸಲು ಹುಸಿ ಬಾಂಬ್ ಕರೆ ಮಾಡಿದ್ದಾಗಿ ಆರೋಪಿ ಹೇಳಿದ್ದಾನೆ.
ತಾನು ಬಿಷ್ಣೋಯಿ ಗ್ಯಾಂಗ್ ಜೊತೆ ನಂಟು ಹೊಂದಿರುವುದಾಗಿಯೂ ಸುಳ್ಳು ಹೇಳಿದ್ದಾನೆ. ಆರೋಪಿಯನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿರಿಸಲಾಗಿದ್ದು, ಯಾವುದೇ ಕ್ರಿಮಿನಲ್ ಗ್ಯಾಂಗ್‌ನೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂಬುದು ದೃಢಪಟ್ಟಿದೆ. ಅಪರಾಧಕ್ಕೆ ಬಳಸಿದ್ದ ಸಿಮ್ ಕಾರ್ಡ್ ಮತ್ತು ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲು ಪ್ರಯತ್ನಿಸಲಾಗುತ್ತಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಯನಾಡ್ ಉಪಚುನಾವಣೆ: ರಾಹುಲ್, ಪ್ರಿಯಾಂಕಾ, ಸಿದ್ದರಾಮಯ್ಯ, ಡಿಕೆಶಿ ಚಿತ್ರವಿರುವ ಆಹಾರ ಕಿಟ್ ಪೊಲೀಸರ ವಶ