ಬೆಂಗಳೂರು: ನಗರದ ಸೆಂಟ್ರಲ್ ಜೈಲಿನ ಕೈದಿಗಳು ಸಿದ್ಧಪಡಿಸುವ ಬೇಕರಿ ವಸ್ತುಗಳು, ಕರಕುಶಲ ವಸ್ತುಗಳ ತಯಾರಿಕೆಗೆ ಕೊರೊನಾ ವೈರಸ್ ಅಡ್ಡಿಯಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಬೇಕರಿ ತಿನಿಸುಗಳು, ಕರಕುಶಲ ವಸ್ತುಗಳು, ಬಟ್ಟೆ ನೇಯ್ಗೆ ಹಾಗೂ ದೇವನಹಳ್ಳಿಯ ಕೋರಮಂಗಲದಲ್ಲಿರುವ ಬಯಲು ಬಂಧಿಖಾನೆಯಿಂದ ಸೆಂಟ್ರಲ್ ಜೈಲಿಗೆ ಸರಬರಾಜು ಆಗುವ ತರಕಾರಿಯಲ್ಲಿ ವ್ಯತ್ಯಯವಾಗಿದೆ.
ಪಶ್ಚಾತ್ತಾಪ ನೆರಳಿನಲ್ಲಿ ಸಜೆ ಅನುಭವಿಸುತ್ತಿರುವ ಕೈದಿಗಳಿಗೆ ಕೌಶಲ್ಯ ಆಧಾರಿತ ಯೋಜನೆಯಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರತ್ಯೇಕವಾಗಿ ಬೇಕರಿ ತಿನಿಸುಗಳ ತಯಾರಿಕೆ, ಕರಕುಶಲ ವಸ್ತು, ಬಟ್ಟೆ ನೇಯುವುದು ಸೇರಿದಂತೆ ವಿವಿಧ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ. ಜೈಲಿನಲ್ಲಿ ಉತ್ಪಾದಿಸಿ ಬೇರೆ-ಬೇರೆ ಕಡೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಈ ಮೂಲಕ ಕೈದಿಗಳು ವೃತಿ ಕೌಶಲ್ಯ ಹೆಚ್ಚಿಸಿಕೊಂಡರೆ, ಮಾರಾಟದಿಂದ ಬಂದ ಹಣ ಸರ್ಕಾರದ ಖಜಾನೆ ಸೇರುತ್ತಿದೆ.
ಕೊರೊನಾ ಕಾರಣಕ್ಕಾಗಿ ಕಳೆದ ಮೂರು ತಿಂಗಳಿಂದ ಉತ್ಪಾದನೆಯಲ್ಲಿ ಇಳಿಕೆ ಕಂಡಿದೆ. ಬೇಕರಿ ತಿನಿಸು ಸೇರಿದಂತೆ ಎಲ್ಲಾ ವಿಭಾಗಳಿಂದ ತಯಾರಿಸಿದ ವಸ್ತುಗಳ ಮಾರಾಟ ಪ್ರಮಾಣ ಕಡಿಮೆಯಾಗಿದೆ. ಕಳೆದ ಜನವರಿಯಲ್ಲಿ 3.79 ಲಕ್ಷ ಗಳಿಕೆಯಾದರೆ ಮಾರ್ಚ್ನಲ್ಲಿ 3.45 ಲಕ್ಷ ರೂ.ಗಳಿಗೆ ಇಳಿದಿದೆ. ಮೇ ತಿಂಗಳಲ್ಲಿ ಸುಮಾರು 3 ಲಕ್ಷ ರೂ. ಮಾತ್ರ ಆದಾಯದ ಬಂದಿದೆ. ಕೊರೊನಾ ಕಾರಣಕ್ಕಾಗಿ ಜೈಲಿನಲ್ಲಿರುವ ಉತ್ಪಾದನೆ ಘಟಕ ಕೆಲದಿನಗಳ ಕಾಲ ಬಂದ್ ಮಾಡಿ ಸ್ಯಾನಿಟೈಸ್ ಮಾಡಲಾಗಿತ್ತು. ಇದೀಗ ಜೈಲಾಧಿಕಾರಿಗಳು ಹಂತ-ಹಂತವಾಗಿ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಮತ್ತೆ ತರಹೇವಾರಿ ಜೈಲು ವಸ್ತುಗಳನ್ನು ತಯಾರಿಸಲು ಅನುವು ಮಾಡಿಕೊಟ್ಟಿದ್ದಾರೆ.
ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಕೈದಿಗಳು ತಯಾರಿಸಿದ ವಸ್ತುಗಳು ಹಾಗೂ ಬೇಕರಿ ತಿನಿಸುಗಳಿಂದ 2019-20ರಲ್ಲಿ 1.06 ಕೋಟಿ ರೂ. ಆದಾಯ ಬಂದಿದೆ. 2017-18 ಹಾಗೂ 2018-2019ರಲ್ಲಿ ಕ್ರಮವಾಗಿ 74 ಹಾಗೂ 82 ಲಕ್ಷ ರೂಪಾಯಿ ವಹಿವಾಟು ಆಗಿತ್ತು. ಲಾಕ್ಡೌನ್ ಅವಧಿಯಲ್ಲಿ ಹೊರಗಡೆ ಉತ್ಪನ್ನಗಳನ್ನು ಮಾರಾಟ ಮಾಡಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಉತ್ಪಾದಿಸಲಾಗಿದೆ.
ಜೈಲಿನಲ್ಲಿ ಬೇಕರಿ ತಿನಿಸುಗಳಾದ ಮಿಲ್ಕ್ ಬ್ರೇಡ್, ಬನ್, ಹನಿ ಕೇಕ್, ದಿಲ್ ಪಸಂದ್, ಚಾಕೊಲೇಟ್ ಕೇಕ್, ಬಿಸ್ಕತ್, ರಸ್ಕ್, ಲಾಡು, ಈರುಳ್ಳಿ ಬೊಂಡ, ಎಗ್ ಪಪ್ಸ್ ತಯಾರಾಗುತ್ತದೆ. ಇಷ್ಟೇ ಅಲ್ಲದೆ ಬೀರು, ಕುರ್ಚಿ, ಟೇಬಲ್, ಬೆಡ್ ಶೀಟ್, ಕರ್ಚಿಫ್, ಪಂಚೆ, ಶರ್ಟ್, ಸೀರೆ, ಜೈಲು ಸಿಬ್ಬಂದಿ ಹಾಗೂ ಗೃಹ ರಕ್ಷಕರ ಸಮವಸ್ತ್ರ ಸೇರಿದಂತೆ ನಾನಾ ರೀತಿಯ ವಸ್ತುಗಳು ಉತ್ಪಾದನೆಯಾಗುತ್ತಿವೆ.
ತರಕಾರಿ ಸರಬರಾಜು ವ್ಯತ್ಯಯ:
ಸೆಂಟ್ರಲ್ ಜೈಲಿನಲ್ಲಿ ಸಾರ್ಮರ್ಥ್ಯಕ್ಕಿಂತ ಅಧಿಕ, ಅಂದರೆ 4 ಸಾವಿರಕ್ಕಿಂತ ಹೆಚ್ಚು ಕೈದಿಗಳಿದ್ದಾರೆ. ಪ್ರತಿನಿತ್ಯ ಅಡುಗೆ ಮಾಡಲು ನೂರಾರು ಕೆ.ಜಿ ತರಕಾರಿ ಬೇಕಾಗುತ್ತದೆ. ತರಕಾರಿ ಸರಬರಾಜು ಮಾಡಲೇಂದೇ ದೇವನಹಳ್ಳಿಯ ಕೋರಮಂಗಲದಲ್ಲಿ ನಿರ್ಮಾಣವಾಗಿರುವ 114 ಎಕರೆ ಕೃಷಿ ಭೂಮಿಯಲ್ಲಿ ಜೀವಾವಧಿ ಶಿಕ್ಷಗೆ ಒಳಗಾದ ಕೈದಿಗಳೇ ರೈತರಾಗಿ ತರಕಾರಿ ಬೆಳೆಯುತ್ತಿದ್ದಾರೆ. ಇಲ್ಲಿ ಗರಿಷ್ಠ 72 ಮಂದಿ ಕೈದಿಗಳು ಇರಲು ಸಾರ್ಮರ್ಥ್ಯ ಹೊಂದಿದ್ದು ಪ್ರಸ್ತುತ 42 ಕೈದಿಗಳು ರೈತರಾಗಿ ಪರಿವರ್ತನೆಗೊಂಡು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಮಾರ್ಚ್ನಲ್ಲಿ 1,200 ಕೆ.ಜಿ ಮೂಲಂಗಿ, 1600 ಕೆ.ಜಿ ಹಿರೇಕಾಯಿ, 950 ಕೆ.ಜಿ ತೊಂಡೆಕಾಯಿ, 975 ಕೆಜಿ ಗೆಡ್ಡೆಕೋಸು, 850 ಕೆ.ಜಿ ಬೀನ್ಸ್, 400 ಕೆ.ಜಿ ಎಲೆಕೋಸು ಹಾಗೂ 275 ಕೆ.ಜಿ ನುಗ್ಗೆಸೊಪ್ಪು ಸೇರಿದಂತೆ ಒಟ್ಟು 86,775 ರೂ. ಮೌಲ್ಯದ ತರಕಾರಿ ಜೈಲಿಗೆ ಸರಬರಾಜು ಮಾಡಲಾಗಿದೆ. ಅದೇ ರೀತಿ ಏಪ್ರಿಲ್ನಲ್ಲಿ 14,640 ರೂ., ಮೇ ತಿಂಗಳಲ್ಲಿ 23,500 ರೂ. ಬೆಲೆಯ ತರಕಾರಿ ಸರಬರಾಜಾಗಿದೆ ಎಂದು ಅಧಿಕಾರಿಗಳು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.