ಬೆಂಗಳೂರು: ಆದಾಯಕ್ಕೂ ಮೀರಿ 1.24 ಕೋಟಿ ರೂ. ಆಸ್ತಿ ಗಳಿಕೆ ಹಾಗೂ ವಿದೇಶಿ ವಿನಿಮಯ ಆರೋಪದಡಿ ಮಾಜಿ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಹಾಗೂ ಆತನ ಪತ್ನಿಗೆ 32ನೇ ಸಿಟಿ ಸಿವಿಲ್ಸ್ ಹಾಗೂ ಸೆಷನ್ಸ್ ನ್ಯಾಯಾಲಯವು 3 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದ ಮಾಜಿ ಆರ್‌ಟಿಒ ಅಧಿಕಾರಿ ಜೆ.ವಿ.ರಾಮಯ್ಯ ಹಾಗೂ ಆತನ ಪತ್ನಿ ಲಲಿತಾ ಅಪರಾಧಿಗಳು.
2009ರಲ್ಲಿ ಆರ್.ಟಿ.ಒ ಅಧಿಕಾರಿಯಾಗಿ ಜೆ.ವಿ.ರಾಮಯ್ಯ ಕಾರ್ಯ ನಿರ್ವಹಿಸುತ್ತಿದ್ದಾಗ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಕೋಲಾರ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದಾಗ ಆದಾಯ ಮೀರಿ ಹಣ ಗಳಿಸಿರುವುದು ಹಾಗೂ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಸುಳಿವು ಪತ್ತೆಯಾಗಿತ್ತು. ಈ ಹಿನ್ನೆಲೆ ಲೋಕಾಯುಕ್ತ ದಾಳಿ ನಡೆಸಿದಾಗ ಆದಾಯಕ್ಕೂ ಮೀರಿ 1.24 ಕೋಟಿ ರೂ. (ಶೇ.415) ಆಸ್ತಿ ಗಳಿಸಿರುವುದು ಪತ್ತೆಯಾಗಿತ್ತು.
ಬಳಿಕ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಜಾರಿ ನಿರ್ದೇಶನಾಲಯ (ಇಡಿ) 2017ರಲ್ಲಿ ಆರೋಪಿಗಳಿಗೆ ಸಂಬಂಧಿಸಿದ 70.27 ಲಕ್ಷ ಮೌಲ್ಯದ ಆಸ್ತಿ ಜಪ್ತಿ ಮಾಡಿತ್ತು. 2019 ರಲ್ಲಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಇಡಿ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಪಿಎಂಎಲ್ಎ ಕಾಯ್ದೆ 2002 ರಡಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಂಪತಿಗೆ ನ್ಯಾಯಾಲಯವು 3 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಇದನ್ನೂ ಓದಿ: ರೋಹಿಣಿ ಸಿಂಧೂರಿಗೆ ನೋಟಿಸ್: ಶನಿವಾರ ಖುದ್ದು ಕಾರ್ಯದರ್ಶಿ ಕಚೇರಿಗೆ ಹಾಜರಾಗಲು ಸೂಚನೆ