ಬೆಂಗಳೂರು: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಕ್ಲೀನ್ ಚಿಟ್ ನೀಡಿ ಬಿ ರಿಪೋರ್ಟ್ ಸಲ್ಲಿಸಿದ್ದ ಉಡುಪಿ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೆ.27ರೊಳಗೆ ಸಂತೋಷ್ ಸಾವು ಪ್ರಕರಣ ಸಂಬಂಧಿಸಿದಂತೆ ಎಲ್ಲಾ ದಾಖಲಾತಿಗಳನ್ನು ಒದಗಿಸುವಂತೆ ತಿಳಿಸಿದೆ.
ಬಿ ರಿಪೋರ್ಟ್ ವಿರೋಧಿಸಿ ನ್ಯಾಯಾಲಯಕ್ಕೆ ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ಅವರು ನಿನ್ನೆ ತಕರಾರು ಅರ್ಜಿ ಸಲ್ಲಿಸಿದ್ದರು. ಇಂದು ನ್ಯಾಯಾಲಯ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತು. ದೂರುದಾರರ ಪರ ವಕೀಲ ಕೆ ಬಿ ಎನ್ ಸ್ವಾಮಿ ವಾದ ಮಂಡಿಸಿ, ದೂರುದಾರರ ಸಹೋದರನ ಸಾವಿಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸರು ಸಲ್ಲಿಸಿದ ಅಂತಿಮ ವರದಿಯಲ್ಲಿ ಸಮಗ್ರವಾಗಿ ಯಾವುದೇ ದಾಖಲಾತಿ ಒದಗಿಸಿಲ್ಲ. ಹೀಗಾಗಿ ತನಿಖಾಧಿಕಾರಿಗಳಿಗೆ ದಾಖಲಾತಿ ನೀಡುವಂತೆ ಸೂಚಿಸಬೇಕೆಂದು ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಬಿ ರಿಪೋರ್ಟ್ನಲ್ಲಿ ಇಲ್ಲದಿರುವ ಅಂಶಗಳ ಬಗ್ಗೆ ಸಂಪೂರ್ಣವಾಗಿ ಸೆ.17ರ ರೊಳಗೆ ದಾಖಲೆಗಳನ್ನು ಸಲ್ಲಿಸಬೇಕೆಂದು ಉಡುಪಿ ನಗರ ಪೊಲೀಸರಿಗೆ ನಿರ್ದೇಶನ ನೀಡಿದೆ.
ದಾಖಲಾತಿ ಬಳಿಕ ಆಕ್ಷೇಪಣೆ ಅರ್ಜಿ ಸಲ್ಲಿಕೆ: ವಕೀಲ ಕೆ ಬಿ ಎನ್ ಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡಿ, ಕೋರ್ಟ್‌ಗೆ ಸಲ್ಲಿಸಿರುವ ಅಂತಿಮ ವರದಿ ಅಪೂರ್ಣವಾಗಿದೆ. ಈ ಸಂಬಂಧ ದಾಖಲಾತಿ ಒದಗಿಸುವಂತೆ ಸೂಚಿಸುವಂತೆ ಕೋರ್ಟ್‌ಗೆ ನಿನ್ನೆ ಮನವಿ ಮಾಡಿಕೊಂಡಿದ್ದೆವು. ಇದರಂತೆ ನ್ಯಾಯಾಲಯ ಇಂದು ಎಲ್ಲಾ ದಾಖಲಾತಿ ಸಲ್ಲಿಸುವಂತೆ ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ದಾಖಲಾತಿ ಪರಿಶೀಲಿಸಿದ ಬಳಿಕ ಆಕ್ಷೇಪಣಾ ಅರ್ಜಿ ಸಲ್ಲಿಸಲಾಗುವುದು ಎಂದರು.
ತಮ್ಮನಿಗೆ ಅನ್ಯಾಯ: ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ಮಾತನಾಡಿ, ಉಡುಪಿ ಪೊಲೀಸರು ಸಲ್ಲಿಸಿದ ಬಿ ರಿಪೋರ್ಟ್ ಒಪ್ಪಿಕೊಂಡಿಲ್ಲ. ಆರೋಪಿಗಳಿಗೆ ಬೇಕಾದ ಹಾಗೆ ಪೊಲೀಸರು ತನಿಖೆ ನಡೆಸಿ ನನ್ನ ತಮ್ಮನಿಗೆ ಅನ್ಯಾಯ ಮಾಡಿದ್ದಾರೆ. ಇಲ್ಲಿತನಕ ಎಷ್ಟು ಸಾಕ್ಷಿಗಳಿವೆ, ಅವುಗಳನ್ನು ಕೋರ್ಟ್‌ಗೆ ಹಾಜರು ಪಡಿಸಲು ಕೋರ್ಟ್ ಹೇಳಿದೆ. ನನ್ನ ತಮ್ಮನ ಚಲನವಲನಗಳ ಬಗ್ಗೆ ಕೋರ್ಟ್ ಮಾಹಿತಿ ಕೇಳಿದೆ. ಆತನ ಮೊಬೈಲ್ನಿಂದ ಡಾಟಾ, ಕರೆ ಮಾಹಿತಿ, ಸಿಸಿಟಿವಿ ಸೇರಿದಂತೆ ಸೆ.17 ರೊಳಗೆ ಎಲ್ಲಾ ಸಾಕ್ಷ್ಯ ಸಲ್ಲಿಕೆಗೆ ಸೂಚನೆ ನೀಡಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣ : ಬಿ ರಿಪೋರ್ಟ್ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಕುಟುಂಬಸ್ಥರು