ಬೆಂಗಳೂರು: ವೈಯಕ್ತಿಕ ಕಾರಣಕ್ಕಾಗಿ ವಿಚ್ಛೇದನ ನೀಡಲು ನಿರ್ಧರಿಸಿ ಕೋರ್ಟ್ ಮೆಟ್ಟಿಲೇರಿದ್ದ ದಂಪತಿ ಆಕಸ್ಮಿಕವಾಗಿ ರೈಲಿನಲ್ಲಿ ಭೇಟಿಯಾಗಿದ್ದು, ಟ್ರೈನಿನ ಒಳಗಡೆಯೂ ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಚೆನ್ನೈ ಮೂಲದ ಬಾಲಸುಬ್ರಹ್ಮಣ್ಯಂ 5 ವರ್ಷಗಳ ಹಿಂದೆ ರೇಖಾ ಎಂಬ ಮಹಿಳೆಯನ್ನು ಮದುವೆಯಾಗಿದ್ದ. ಇವರಿಗೆ 3 ವರ್ಷದ ಗಂಡು ಮಗ ಸಹ ಇದೆ. ಕಾರಣಾಂತರಗಳಿಂದ ಪತ್ನಿಗೆ ಡಿವೋರ್ಸ್ ನೀಡಲು ನಿರ್ಧರಿಸಿದ್ದರು ಎನ್ನಲಾಗಿದೆ. ಡಿವೋರ್ಸ್ಗೆ ನಿರ್ಧರಿಸಿದ ನಂತರ ಇಬ್ಬರೂ ಬೇರೆ-ಬೇರೆ ಮನೆಯಲ್ಲಿ ವಾಸವಿದ್ದರು. ಇದೇ ತಿಂಗಳು 23ರ ರಾತ್ರಿ ಚೆನ್ನೈ-ಯಶವಂತಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ತೆರಳುವ ವೇಳೆ ಇಬ್ಬರೂ ಪರಸ್ಪರ ಮೀಟ್ ಆಗಿದ್ದಾರೆ.
ಈ ವೇಳೆ ಪತ್ನಿ ರೇಖಾ, ನನಗೆ ಏಕೆ ವಿಚ್ಛೇದನ ನೀಡುತ್ತಿದ್ದೀಯಾ? ನಾನು ನಿನ್ನನ್ನು ಹೇಗೆ ಹುಡುಕುವುದು, ನಿನ್ನ ಮೊಬೈಲ್ ನಂಬರ್ ಆದರೂ ನನಗೆ ನೀಡು ಎಂದು ತನ್ನ ಪತಿ ಬಾಲಸುಬ್ರಹ್ಮಣ್ಯಂಗೆ ಕೇಳಿದ್ದಾರೆ. ಆದರೆ ಇದಕ್ಕೆ ನಿರಾಕರಿಸಿದ ಬಾಲಸುಬ್ರಹ್ಮಣ್ಯಂ, ರೈಲಿನಲ್ಲಿ ಆಕೆಯ ಜೊತೆ ಎಲ್ಲರ ಸಮ್ಮುಖದಲ್ಲೇ ಗಲಾಟೆ ಮಾಡಿ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಇನ್ನು ಈ ಸಂಬಂಧ ಆತನ ಪತ್ನಿ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.