ಬೆಂಗಳೂರು : ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿಮೇಳ - 2024 ನಡೆಯುತ್ತಿದ್ದು, ಮೇಳದಲ್ಲಿ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನ ಪ್ರದರ್ಶನಕ್ಕೆ ಇಡಲಾಗಿದೆ. ಇವುಗಳಲ್ಲಿ ಕಾಲಿನಿಂದ ತೆಂಗಿನಕಾಯಿ ಸುಲಿಯುವ ಯಂತ್ರ ಜನರ ಗಮನ ಸೆಳೆಯುತ್ತಿದೆ.
ಕೃಷಿ ಇಂಜಿನಿಯರಿಂಗ್ ಮಹಾವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಯಂತ್ರ ಅಭಿವೃದ್ಧಿಪಡಿಸಿದ್ದಾರೆ. ಪೆಡಲ್ ತುಳಿದು ಸೈಕಲ್ ಓಡಿಸುವಂತೆ, ಇಲ್ಲಿ ಪೆಡಲ್ ತುಳಿಯುವ ಮೂಲಕ ಸುಲಭವಾಗಿ ತೆಂಗಿನಕಾಯಿ ಸುಲಿಯಬಹುದು.
ಕೃಷಿ ಯಂತ್ರೋಪಕರಣ ಹಾಗೂ ಶಕ್ತಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಜಯಶ್ರೀ ಜಿ.ಸಿ ಅವರು ಸುಧಾರಿತ ತೆಂಗಿನಕಾಯಿ ಸುಲಿಯುವ ಯಂತ್ರದ ಬಗ್ಗೆ ಮಾಹಿತಿಯನ್ನ ನೀಡಿದರು.
ಕೈಯಿಂದ ತೆಂಗಿನಕಾಯಿ ಸುಲಿಯುವ ಯಂತ್ರಗಳನ್ನ ನಾವು ನೋಡಿದ್ದೇವೆ. ಈ ಯಂತ್ರಗಳಲ್ಲಿ ಕೈ ಮತ್ತು ಸೊಂಟಕ್ಕೆ ತುಂಬಾ ಶ್ರಮ ಬೇಕಾಗುತ್ತದೆ. ಆದರೆ, ಕಾಲಿನಿಂದ ಸುಲಿಯುವ ಯಂತ್ರದಲ್ಲಿ ಬಹಳ ಸುಲಭವಾಗಿ ಸುಲಿಯಬಹುದು. ಸಾಕಷ್ಟು ಸಮಯ ಕುಳಿತುಕೊಂಡು ತೆಂಗಿನಕಾಯಿ ಸುಲಿಯಬಹುದು. ಆಯಾಸ ಆಗುವುದಿಲ್ಲ, ಮಹಿಳೆಯರು ಸಹ ಬಹಳ ಸುಲಭವಾಗಿ ತೆಂಗಿನಕಾಯಿ ಸುಲಿಯಬಹುದಾಗಿದೆ ಎಂದು ಹೇಳಿದರು.
ಹಳೇ ಸೈಕಲ್ ಬಳಸಿ ಯಂತ್ರ ತಯಾರಿಕೆ : ಗಂಟೆಗೆ ಸುಮಾರು 80 ರಿಂದ 100 ತೆಂಗಿನಕಾಯಿ ಸುಲಿಯಬಹುದು. ನುರಿತ ಪರಿಣಿತರು ಹೆಚ್ಚಿನ ಕಾಯಿಗಳನ್ನ ಸುಲಿಯಬಹುದು. ಹೊಸಬರು ಎರಡರಿಂದ ಮೂರು ತೆಂಗಿನಕಾಯಿ ಸುಲಿಯುವಷ್ಟರಲ್ಲಿ ಯಂತ್ರದ ಬಗ್ಗೆ ಪರಿಣಿತಿಯನ್ನ ಪಡೆಯಬಹುದಾಗಿದೆ. ಗುಜರಿಗೆ ಹಾಕಿದ ಹಳೇ ಸೈಕಲ್ಗಳನ್ನ ಬಳಸಿಕೊಂಡು ಯಂತ್ರವನ್ನ ತಯಾರಿಸಬಹುದಾಗಿದ್ದು,ಈ ಸುಧಾರಿತ ತೆಂಗಿನಕಾಯಿ ಯಂತ್ರಕ್ಕೆ 1,000 ರಿಂದ 1,500 ರೂ. ಬೆಲೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಕೃಷಿ ಮೇಳ 2024: ಆನ್‌ಲೈನ್ ಮೂಲಕವೂ ಮೇಳ ವೀಕ್ಷಿಸಲು ಅವಕಾಶ ಮಾಡಿಕೊಟ್ಟ ಕೃಷಿ ವಿವಿ