ಬೆಂಗಳೂರು:ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಬಾಕಿ ಅನುದಾನ ಬಿಡುಗಡೆ ಸಂಬಂಧ ಒಂದು ಕಮಿಟಿ ಮಾಡುತ್ತೇವೆ. ಆಗಸ್ಟ್ 14 ರ ಒಳಗೆ ಅನುದಾನ ಬಿಡುಗಡೆ ಮಾಡಬೇಕು. ಇದಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಬಿಡುಗಡೆಯಾಗಿರುವ ಅನುದಾನ ಕಡಿತ ಕುರಿತು ವಿಧಾನಸೌಧದಲ್ಲಿ ಇಂದು ಕರೆದಿದ್ದ ಪರಿಷತ್ ಸದಸ್ಯರ ಸಭೆ ನಂತರ ಅವರು ಮಾತನಾಡಿದರು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ಮಾಡುತ್ತೇನೆ. ಶಾಸಕರ ಕಷ್ಟಗಳನ್ನು ನೋಡುವುದಕ್ಕೆ ಸಭಾಪತಿ ಇರುವುದು ಎಂದರು.
ಕೆಲವು ಇಲಾಖೆಗಳಿಗೆ ಪತ್ರ ಬರೆದಿದ್ದೇನೆ. ಜನರ ಯೋಜನೆಗಳಿಗೆ ಅಧಿಕಾರಿಗಳು ತಡೆ ಮಾಡಬಾರದು. ಜಿಲ್ಲಾಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತೇನೆ ಎಂದರು. ಪರಿಷತ್ ಸದಸ್ಯರಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಬರುತ್ತಿಲ್ಲ. ಪ್ರತಿವರ್ಷ 600 ಕೋಟಿ ರೂ. ಬಜೆಟ್ ಮಾಡ್ತೇವೆ. ಆದರೆ ನಮಗೆ ಅನುದಾನ ಯಾಕೆ ಬರ್ತಿಲ್ಲ ಎಂದರು.
ಸ್ಥಳೀಯ ಶಾಸಕರಿಗೆ ಹಣ ನೀಡಬೇಕು ಎಂದು ಎಲ್ಲ ಶಾಸಕರು ಸಲಹೆಗಳನ್ನು ನೀಡಿದ್ದಾರೆ. ಇನ್ನೊಂದು ಸಲ ಸಭೆ ಕರೆಯುತ್ತೇನೆ ಎಂದು ತಿಳಿಸಿದರು. ಇಡೀ ರಾಜ್ಯಕ್ಕೆ ಒಂದೇ ನ್ಯಾಯ ಇರಬೇಕು. ಯಾರಿಗೂ ಅನ್ಯಾಯವಾಗಬಾರದು. ಸರಿಯಾಗಿ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದಾಗಿ ಎಲ್ಲ ಶಾಸಕರಿಗೆ ಬಹಳ ತೊಂದರೆಯಾಗಿದೆ. ಪ್ರತಿ ಶಾಸಕರಿಗೆ ಎರಡು ಕೋಟಿ ಅನುದಾನ ನೀಡಬೇಕು. ಕೊರೊನಾದಿಂದ ತಡೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ಮೂರು ವರ್ಷಗಳಿಂದ ಈ ರೀತಿಯ ಸಮಸ್ಯೆಯಿದೆ. 90 ಕೋಟಿ ರೂ. ಅನುದಾನ ಬಿಡುಗಡೆಯಾಗಬೇಕು. ಆದರೆ, ಅನುದಾನ ಬಿಡುಗಡೆ ಮಾಡಿಲ್ಲ. ಇದರ ಸ್ಪಷ್ಟವಾದ ಮಾಹಿತಿ ಇಲ್ಲ. ಅತಿ ಶೀಘ್ರದಲ್ಲೇ ಇದಕ್ಕೆ ಪರಿಹಾರ ಹುಡುಕುತ್ತೇವೆ ಎಂದು ಹೇಳಿದರು.