ಬೆಂಗಳೂರು: ಹಿಂದಿಯ ಖಾಸಗಿ ವಾಹಿನಿಯ ಕ್ರೈಂ ಪೆಟ್ರೋಲ್ ಎಂಬ ಕಾರ್ಯಕ್ರಮದಿಂದ ಪ್ರೇರಣೆಗೊಂಡು, ಬಾಲಕನ ಕಿಡ್ನಾಪ್ ಮಾಡಿದ್ದ ವ್ಯಕ್ತಿ ಕೊನೆಗೂ ಅಂದರ್ ಆಗಿದ್ದಾನೆ. ಪಂಜಾಬ್ ಮೂಲದ ಆರೋಪಿ ಚಿರಾಗ್ ಆರ್. ಮೆಹ್ತಾ ಎಂಬ ವ್ಯಕ್ತಿ ಬಂಧಿತ ಆರೋಪಿಯಾಗಿದ್ದಾನೆ.
ದುಡ್ಡು ಮಾಡುವ ಶೋಕಿಗೆ ಬಿದ್ದು ನಿನ್ನೆ ಮಧ್ಯಾಹ್ನ 3 ಗಂಟೆಗೆ, ಖಾಸಗಿ ಶಾಲೆ ವಿದ್ಯಾರ್ಥಿಗೆ ಬಾ ನಿನ್ನ ಗೆಳೆಯ ಪಕ್ಕದ ರಸ್ತೆಯಲ್ಲಿ ನಿಂತಿದ್ದಾನೆ ಅಂತ ಕರೆದುಕೊಂಡು ಹೋಗಿ ಕಿಡ್ನಾಪ್ ಮಾಡಿದ್ದ. ಬಳಿಕ ಬಾಲಕನ ಬಳಿ ತಂದೆಯ ನಂಬರ್ ಪಡೆದು ಕಾಲ್ ಮಾಡಿ 5 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ. ಈ ವಿಚಾರ ತಿಳಿದ ಬಾಲಕನ ತಂದೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ರು.
ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಕಾಟನ್ ಪೇಟೆ ಪೊಲೀಸರು, ಆರೋಪಿ ಬಳಸಿದ ನಂಬರ್ ಟ್ರ್ಯಾಕ್ ಮಾಡಿದಾಗ ಲ್ಯಾವಲ್ಲಿ ರಸ್ತೆಯ ಪ್ರತಿಷ್ಠಿತ ಏರ್ಲೈನ್ ಹೊಟೆಲ್ನಲ್ಲಿ ಲೊಕೇಶನ್ ತೊರಿಸಿತ್ತು. ಹೀಗಾಗಿ ಕಿಡ್ನಾಪರ್ ಅಲ್ಲೇ ಇರುವ ಶಂಕೆಯ ಮೇರೆಗೆ, ಎರಡು ತಂಡ ರಚನೆ ಮಾಡಿಕೊಂಡು ಹುಡುಕಿದಾಗ ಮಗು ಸಮೇತವಾಗಿ ಕಿಡ್ನಾಪರ್ ಸಿಕ್ಕಿ ಬಿದ್ದಿದ್ದಾನೆ. ಆತನ ಹಿಡಿಯಲು ಚೇಸ್ ಮಾಡಿದಾಗ ಕಾರ್ಗೆ ಡಿಕ್ಕಿ ಹೊಡೆದು, ನೆಲಕ್ಕೆ ಬಿದ್ದು ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇನ್ನು ಕಾಟನ್ ಪೇಟೆ ಪೊಲೀಸರು ತನಿಖೆಗೆ ಒಳಪಡಿಸಿದಾಗ ಹಿಂದಿ ವಾಹಿನಿಯ ಕ್ರೈಂ ಪೆಟ್ರೋಲ್ ಎಂಬ ಎಪಿಸೋಡ್ಸ್ ನೋಡಿ, ಮಗುವನ್ನು ಕಿಡ್ನಾಪ್ ಮಾಡಿ ಹೇಗೆ ಹಣ ಮಾಡೋದು ಅನ್ನೊದನ್ನು ತಿಳಿದು ಕೃತ್ಯ ಮಾಡಿರುವುದಾಗಿ ತಿಳಿಸಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿದ ಪೊಲೀಸರು, ಕಿಡ್ನಾಪ್ ಆಗಿದ್ದ ಮಗುವನ್ನು ರಕ್ಷಿಸಿ ತನಿಖೆ ಮುಂದುವರೆಸಿದ್ದಾರೆ.