ಬೆಂಗಳೂರು: ಐಪಿಎಸ್ ಅಧಿಕಾರಿ ಎಡಿಜಿಪಿ ಭಾಸ್ಕರ್ ರಾವ್ ಶನಿವಾರ ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿ ಆಗಿರುವ ರವಿ(Costume Man Ravi Katapad) ಅವರನ್ನು ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಸನ್ಮಾನ ಮಾಡಿ ಅವರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದ್ದಾರೆ.
ರಾವಳಿ ಭಾಗದಲ್ಲಿ ರವಿ ಕಟಪಾಡಿ ಹೆಸರು ಚಿರಪರಿಚಿತ. ಇವರು ಅಷ್ಟಮಿ ಮತ್ತು ವಿಟ್ಲಪಿಂಡಿ ದಿನದಂದು ವೇಷ ಧರಿಸಿ ಜಿಲ್ಲೆಯ ಸುತ್ತಮುತ್ತಲಿನ ಊರೂರು ತಿರುಗಿ ಹಣ ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹಿಸಿದ ದೇಣಿಗೆಯನ್ನು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿಯಾಗಿರುವ ರವಿ, ಕಳೆದ 7 ವರ್ಷಗಳಿಂದ ವೇಷ ಧರಿಸುತ್ತಿದ್ದಾರೆ. ಊರೂರು ತಿರುಗಿ ಲಕ್ಷಾಂತರ ರೂ. ದೇಣಿಗೆ ಸಂಗ್ರಹಿಸಿದ್ದಾರೆ. ರವಿ ಕಟಪಾಡಿ ಜೀವನಕ್ಕಾಗಿ ಕೂಲಿ ಕೆಲಸ ಮಾಡಿಕೊಂಡಿದ್ದು, ಆರ್ಥಿಕವಾಗಿ ಅಷ್ಟೊಂದು ಸದೃಢರಲ್ಲ. ಆದರೂ ಸಂಗ್ರಹವಾದ ಹಣದಲ್ಲಿ ಒಂದು ರೂಪಾಯಿಯನ್ನು ತಾನು ಇಟ್ಟುಕೊಳ್ಳದೆ ಬಡ ಮಕ್ಕಳಿಗೆ ನೀಡಿದ್ದಾರೆ. ಇದುವರೆಗೂ ಏಳು ವರ್ಷದಲ್ಲಿ 79 ಲಕ್ಷ ದೇಣಿಗೆ ಸಂಗ್ರಹವಾಗಿದ್ದು 33 ಮಕ್ಕಳಿಗೆ ನೀಡಿದ್ದಾರೆ. ಇವರ ವೇಷ, ತಿರುಗಾಟದ ಖರ್ಚನ್ನು ಅವರ ತಂಡದವರೇ ಭರಿಸುತ್ತಿರುವುದು ವಿಶೇಷ.
ರವಿ ಅವರ ಮಾನವೀಯ ಕಾಳಜಿ ಗಮನಿಸಿ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿ ಕೊಡುವ 'ಕರೋಡ್ ಪತಿ' ಶೋನಲ್ಲಿ ಕೂಡ ಅವಕಾಶ ನೀಡಲಾಗಿತ್ತು. ಅದರಲ್ಲಿ ಬಂದ 7 ಲಕ್ಷ ರೂಪಾಯಿಯನ್ನು ಕಷ್ಟದಲ್ಲಿರುವವರಿಗೆ ಕೊಟ್ಟು ರವಿ ಉದಾರತೆ ಮೆರೆದಿದ್ದರು.
ಇದನ್ನು ಓದಿ:ಪರೋಪಕಾರಕ್ಕೆ ವಿವಿಧ ವೇಷ.. ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಲಕ್ಷಾಂತರ ರೂ. ನೀಡಿದ ರವಿ ಕಟಪಾಡಿ