ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹನಿ ನೀರಾವರಿ ಯೋಜನೆಯಲ್ಲಿ 1500 ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ಅವರದೇ ಬಿಜೆಪಿ ಶಾಸಕರು ಆರೋಪಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ನಾಯಕರಿಗೆ ಮೂರು ಪ್ರಶ್ನೆಗಳನ್ನು ಕೇಳ ಬಯಸುತ್ತೇನೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು,ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಶಿಗ್ಗಾಂವಿ ಕ್ಷೇತ್ರದಲ್ಲಿ ಹಣ ಲೂಟಿ ಮಾಡಿದ್ದು, ಯಾವುದೇ ರೈತರು ಈ ಹನಿ ನೀರಾವರಿ ಯೋಜನೆಯ ಲಾಭ ಪಡೆದಿಲ್ಲ. ಇದೆಲ್ಲವೂ ನಮ್ಮ ಆರೋಪವಲ್ಲ, ಬಿಜೆಪಿ ನಾಯಕರು ಕಾರ್ಯಕರ್ತರ ಆರೋಪವಾಗಿದೆ ಎಂದು ತಿಳಿಸಿದರು.
ರಾಜ್ಯಪಾಲ ಬಿಜೆಪಿ ನಾಯಕ ಸತ್ಯಪಾಲ್ ಸಿಂಗ್ ಅವರು, ಪ್ರಧಾನಮಂತ್ರಿಗಳು ಭ್ರಷ್ಟಾಚಾರವನ್ನು ದ್ವೇಷಿಸುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ಶಾಸಕ ನೆಹರೂ ಓಲೇಕರ್ ಅವರು ಬೊಮ್ಮಾಯಿ ಅವರು 40% ಕಮಿಷನ್ ಏಜೆಂಟ್ ಎಂದು ಹೇಳಿದ್ದಾರೆ. ಈ ಎಲ್ಲರ ಹೇಳಿಕೆಗಳ ವಿಡಿಯೋ ತುಣುಕುಗಳನ್ನು ಗೌರವ್ ವಲ್ಲಭ್ ಈ ವೇಳೆ ಪ್ರದರ್ಶಿಸಿದರು.
ಚುನಾವಣಾ ಆಯೋಗ ಏನು ಮಾಡುತ್ತಿದೆ. 1500 ಕೋಟಿ ರೂ. ಹೇಗೆ ದುರುಪಯೋಗವಾಯಿತು. ಈ ಹಣ ಸಣ್ಣ ಅಮೌಂಟ್ ಅಲ್ಲ. ರೈತರು ಯಾವ ಸೌಲಭ್ಯವನ್ನು ಪಡೆದಿಲ್ಲ. ರೈತರ ಹೆಸರಿನಲ್ಲಿ ಬೊಮ್ಮಾಯಿ ಅವರು ಹಣ ಲೂಟಿ ಮಾಡಿದ್ದಾರೆ. ಈಗಾಗಲೇ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ಮಾಡಬೇಕೆಂದು ಆಗ್ರಹಿಸಿದರು. ಈ ವಿಚಾರದಲ್ಲಿ ಬಿಜೆಪಿ ನಾಯಕರಿಗೆ ಮೂರು ಪ್ರಶ್ನೆಗಳನ್ನು ಕೇಳುತ್ತಿದ್ದೇವೆ ಎಂದರು.
1. ಈ ಆರೋಪ ಕೇಳಿಬಂದ ನಂತರವೂ ಬಸವರಾಜ ಬೊಮ್ಮಾಯಿ ಅವರಾಗಲಿ, ಬಿಜೆಪಿ ಪಕ್ಷ ಮೌನವಾಗಿರುವುದೇಕೆ?. ಅವರ ಮೌನ ಸಮ್ಮತಿ ಎಂದು ಭಾವಿಸಬಹುದೇ? ಈ ಆರೋಪ ಸುಳ್ಳಾಗಿದ್ದರೆ ಆರೋಪ ಮಾಡಿರುವ ಬಿಜೆಪಿ ಶಾಸಕರ ವಿರುದ್ಧ ಮಾನನಷ್ಟ ಮೊಕದ್ದಮೆ ಯಾಕಿಲ್ಲ? ಮಾನನಷ್ಟ ಮೊಕದ್ದಮೆ ಕೇಸು ದಾಖಲಿಸಿದರೆ, ನೆಹರೂ ಓಲೇಕಾರ್ ಅವರು ಈ ಆರೋಪದ ಸಾಕ್ಷಿ ಒದಗಿಸುತ್ತಾರೆ ಎಂಬ ಭಯವೇ? ಎಂದು ಪ್ರಶ್ನಿಸಿದರು.
2. ಇಡಿ ಸಿಬಿಐ ಆದಾಯ ತೆರಿಗೆ ಸೇರಿದಂತೆ ತನಿಖಾ ಸಂಸ್ಥೆಗಳು ತನಿಖೆ ಯಾಕೆ ಆರಂಭಿಸಿಲ್ಲ? ಬೊಮ್ಮಾಯಿ ಅವರನ್ನು ಕರೆದು ವಿಚಾರಣೆ ನಡೆಸುತ್ತಿಲ್ಲ ಯಾಕೆ? ಬಿಜೆಪಿ ಶಾಸಕರೇ ಕನ್ನಡಿಗರ ಹಣ ಲೂಟಿ ಆಗಿದೆ ಎಂದು ಹೇಳಿದ್ದು, ತನಿಖಾ ಸಂಸ್ಥೆಗಳು ಈ ವಿಚಾರದಲ್ಲಿ ಕಣ್ಣು ತೆರೆದು ಕೂಡಲೇ ಸ್ವಇಚ್ಛೆಯಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
3. ರಾಜ್ಯ ಚುನಾವಣೆ ಆಯೋಗ ಈ ವಿಚಾರವನ್ನು ಯಾಕೆ ಗಂಭೀರ ಪರಿಗಣಿಸುತ್ತಿಲ್ಲ? ಇದು ರಾಜ್ಯದ ಚುನಾವಣೆ ಪ್ರಕ್ರಿಯೆ ಮೇಲೆ ಪರರಿಣಾಮ ಬೀರಲಿದೆ. ಹೀಗಾಗಿ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಈ ವಿಚಾರದಲ್ಲಿ ಆಯೋಗ ಕಾರ್ಯಪ್ರವೃತ್ತವಾಗಿ ಪೊಲೀಸರಿಂದ ತನಿಖೆ ಆರಂಭಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಸಿಆರ್ ಪಿಎಫ್ ಪರೀಕ್ಷೆ ಕನ್ನಡದಲ್ಲಿ ನಡೆಸಬೇಕು: ಸಿಆರ್ ಪಿಎಫ್ ನೇಮಕಾತಿ ಪರೀಕ್ಷೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಈ ವಿಚಾರವಾಗಿ ನಾವು ಪ್ರಶ್ನೆ ಮಾಡಿದ್ದರೂ ಸರ್ಕಾರ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕನ್ನಡದ ಅಭ್ಯರ್ಥಿಗೆ ಇಂಗ್ಲೀಷ್ ಅಥವಾ ಹಿಂದಿ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೆ ಆತನ ಹಕ್ಕನ್ನು ಕಸಿಯಲು ಸಾಧ್ಯವಿಲ್ಲ.
ನಮ್ಮ ಒತ್ತಾಯದ ಮೇರೆಗೆ ಕೇಂದ್ರ ಗೃಹ ಸಚಿವಾಲಯ ತನ್ನ ಆದೇಶ ಹಿಂಪಡೆದಿದೆ. ಸಿಆರ್ ಪಿಎಫ್ ಪರೀಕ್ಷೆ ಕನ್ನಡದಲ್ಲೂ ನಡೆಯಬೇಕು ಎಂಬುದು ನಮ್ಮ ಒತ್ತಾಯ. ಸಿಎಪಿಎ ಪರೀಕ್ಷೆ ಹೇಗೆ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶವಿದೆಯೋ ಅದೇ ರೀತಿ ಸಿಆರ್ ಪಿಎಫ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂಓದಿ:ಚೆಕ್ ಬೌನ್ಸ್ ಪ್ರಕರಣ: ವೈಎಸ್‌ವಿ ದತ್ತಾ ವಿರುದ್ಧ ಜಾಮೀನು ರಹಿತ ವಾರಂಟ್