ಬೆಂಗಳೂರು : ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಇನ್ನೇನು ಚೇತರಿಕೆಯತ್ತ ಹಾದಿ ಹಿಡಿಯುತ್ತಿವೆ ಎನ್ನುವಾಗ ಸುನಾಮಿಯಂತೆ ಅಪ್ಪಳಿಸಿದ ಕೋವಿಡ್ ಸಂಕಷ್ಟ ಅವುಗಳನ್ನು ಮತ್ತೆ ಪ್ರಪಾತಕ್ಕೆ ನೂಕಿತ್ತು.
ಸದ್ಯ ದೇಶದಲ್ಲಿ ಕೊರೊನಾ ಪ್ರಮಾಣದ ಅಬ್ಬರ ಇಳಿದಿದ್ದು, ಕೈಗಾರಿಕೆಗಳು ಮೇಲೇಳುತ್ತಿವೆಯಾದರೂ ಇರುವ ಕಾರ್ಮಿಕರಿಗೆ ವೇತನ ನೀಡಲು ಪರದಾಡುತ್ತಿವೆ. ಆರ್ಥಿಕ ಹಿಂಜರಿತದ ಪರಿಣಾಮ ರಾಜ್ಯದಲ್ಲಿ ಇನ್ನೂ ಕೆಲ ಕೈಗಾರಿಕೆಗಳು ಬಾಗಿಲು ತೆರೆದಿಲ್ಲ. ಮತ್ತೆ ಕೆಲವು ಮುಚ್ಚುವ ಸ್ಥಿತಿಯತ್ತ ಸಾಗಿವೆ. ಕೆಲವು ಕೈಗಾರಿಕೆಗಳು ಮಾತ್ರ ಗತವೈಭವದತ್ತ ಅಂಬೆಗಾಲು ಇಡುತ್ತಿವೆ. ನಿರೀಕ್ಷಿತ ಪ್ರಮಾಣದಲ್ಲಿ ಹೊಸದಾಗಿ ಆರ್ಡರ್ ಬರುತ್ತಿಲ್ಲ.
ಈಗಾಗಲೇ ಉತ್ಪಾದಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡಲೂ ಆಗದ ಸ್ಥಿತಿ ಎದುರಾಗಿದೆ. ಇದರಿಂದಾಗಿ ಸಾಲದ ಕಂತು ಕಟ್ಟಲು, ಕಾರ್ಮಿಕರ ವೇತನ, ಬಾಡಿಗೆ ಪಾವತಿಸಲು ಉದ್ಯಮಿಗಳು ಹೆಣಗಾಡುತ್ತಿದ್ದಾರೆ.
ಇದನ್ನೂ ಓದಿ...ವೊಡಾ - ಐಡಿಯಾ & ಬಜಾಜ್ ಫೈನಾನ್ಸ್ ಒಪ್ಪಂದ: EMIಗೆ ಸ್ಮಾರ್ಟ್ಫೋನ್, ಪ್ರಿಪೇಯ್ಡ್ ಸಿಮ್ ಲಭ್ಯ
ಕೊರೊನಾ ಆರಂಭದಲ್ಲಿ ಕರಾವಳಿ ಭಾಗದ ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದ ಸಾವಿರಾರು ವಲಸೆ ಕಾರ್ಮಿಕರು ಊರಿಗೆ ಮರಳಿದವರು ಇನ್ನೂ ಈ ಕಡೆ ತಲೆ ಹಾಕಿಲ್ಲ. ಅರ್ಧದಷ್ಟೇ ಮಾತ್ರ ವಾಪಸ್ ಬಂದಿದ್ದಾರೆ. ಇನ್ನು ಶೇ.60ರಷ್ಟು ಕೈಗಾರಿಕೆಗಳು ಪುನಾರಂಭಗೊಂಡಿದ್ದು, ಅಗತ್ಯವಿರುವಷ್ಟು ಮಾತ್ರ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಿವೆ.
ಗೋಡಂಬಿ ಕಾರ್ಖಾನೆಗಳು ಆರಂಭಗೊಂಡಿದ್ದರೂ ಕಚ್ಚಾ ವಸ್ತುಗಳ ಕೊರತೆ ಕಾಡುತ್ತಿದೆ. ಮತ್ತೊಂದೆಡೆ ಕಚ್ಚಾ ವಸ್ತುಗಳ ಬೆಲೆ ಏರುತ್ತಿರುವುದು ಉದ್ಯಮಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಧಾರವಾಡದಲ್ಲಿ ಸುಮಾರು 3 ಸಾವಿರ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಕೊರೊನಾ ಹೊಡೆತಕ್ಕೆ ನಲುಗಿದ್ದು, ಅದರಲ್ಲಿ ಸಣ್ಣಪುಟ್ಟ ಕೈಗಾರಿಕೆಗಳು ಬಾಗಿಲು ಹಾಕಿವೆ. ಊರಿಗೆ ಮರಳಿದ್ದ ಎಷ್ಟೋ ಕಾರ್ಮಿಕರು ಕೈಗಾರಿಕೆಗಳ ಆರಂಭದ ನಂತರ ಮರಳಿದ್ದು, ಕೈಗಾರಿಕೋದ್ಯಮಿಗಳು ಮಂದಹಾಸ ಬೀರುವಂತಾಗಿದೆ. ದೊಡ್ಡ ದೊಡ್ಡ ಕೈಗಾರಿಗಳು ಪ್ರಾರಂಭವಾಗಿದ್ದು, ಬಿಡಿಭಾಗಗಳು ಹಾಗೂ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಹೆಚ್ಚಿನ ಪ್ರಗತಿ ಕಾಣುತ್ತಿದೆ.
ಅದರಲ್ಲೂ ಆಹಾರೋದ್ಯಮ, ಅಗ್ರೋ ಬೇಸ್ ಇಂಡಸ್ಟ್ರಿ ಹಾಗೂ ಆಟೋಮೊಬೈಲ್ ಇಂಡಸ್ಟ್ರಿ ತನ್ನ ವೇಗ ಹೆಚ್ಚಿಸಿಕೊಂಡಿವೆ. ಕೈಗಾರಿಕೆಗಳಲ್ಲಿ ಉತ್ಪಾದನೆ, ವಹಿವಾಟು ಹಾಗೂ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡು ಬರುತ್ತಿದೆ ಎಂದು ಕೈಗಾರಿಕೋದ್ಯಮಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ...ಕೇಂದ್ರದ ಜಿಎಸ್‌ಟಿ ನಷ್ಟ ಪರಿಹಾರ: 7ನೇ ಕಂತಿನಡಿ ರಾಜ್ಯಗಳಿಗೆ 6,000 ಕೋಟಿ ರೂ. ಬಿಡುಗಡೆ
ಕೇಂದ್ರ ಸರ್ಕಾರವು ವಿಶೇಷ ಪ್ಯಾಕೇಜ್ ಪ್ರಕಟಿಸಿದ್ದು, ಅಲ್ಪ ಪ್ರಮಾಣದಲ್ಲಿ ಉಸಿರಾಡುವಂತೆ ಮಾಡಿದೆ. ಲಾಕ್‌ಡೌನ್‌ನಿಂದ ಪಾತಾಳಕ್ಕೆ ತಳ್ಳಲ್ಪಟ್ಟ ಸಣ್ಣ ಕೈಗಾರಿಕೆಗಳು ಇದರ ಲಾಭ ಪಡೆದಿವೆ. ಜಿಎಸ್‌ಟಿ, ತೆರಿಗೆಯಿಂದ ವಿನಾಯಿತಿ ಹಾಗೂ ಕೈಗಾರಿಕೆ ಕ್ಷೇತ್ರದ ಪ್ರಗತಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕಿದೆ. ಹಾಗೆಯೇ ಲಾಕ್ಡೌನ್ ಅವಧಿಯ ಬಡ್ಡಿಯನ್ನು ಮನ್ನಾ ಮಾಡಿದ್ರೆ ಕೈಗಾರಿಕೆಗಳು ಬದುಕುಳಿಯಲಿವೆ ಎಂಬ ಒತ್ತಾಯವೂ ಕೇಳಿ ಬರುತ್ತಿದೆ.