ಬೆಂಗಳೂರು: ಕೊರೊನಾ ಸೋಂಕಿತ ಟೆಕ್ಕಿ ಪ್ರಕರಣದ ನಂತರ ನಮಗೂ ಟೆಸ್ಟ್ ಮಾಡಿ ಎಂದು ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗಿತ್ತು. ಈಗಾಗಲೇ ಅಡ್ಮಿಟ್ ಆಗಿದ್ದ 5 ಮಂದಿಯ ರಿಪೋರ್ಟ್ ಕೂಡ ನೆಗೆಟಿವ್ ಬಂದಿದೆ ಎಂದು ರಾಜೀವ್ ಗಾಂಧಿ ಎದೆರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ತೆಲಂಗಾಣ ಮೂಲದ ಟೆಕ್ಕಿಗೆ ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆ ನಿನ್ನೆ ಒಂದೇ ದಿನ 153 ಮಂದಿಗೆ ತಪಾಸಣೆ ಮಾಡಲಾಗಿದೆ. 153 ಮಂದಿಯಲ್ಲಿ 34 ಜನರ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, 33 ಮಂದಿಯ ವರದಿ ನೆಗೆಟಿವ್ ಬಂದಿದೆ. ಇದರಿಂದಾಗಿ ಆರೋಗ್ಯಾಧಿಕಾರಿಗಳು ನಿರಾಳರಾಗಿದ್ದಾರೆ. ರಾಜ್ಯಕ್ಕಿದ್ದ ಕೊರೊನಾ ಆತಂಕ ದೂರವಾಗಿದ್ದು, ತೆಲಂಗಾಣದ ಟೆಕ್ಕಿಗೆ ಪಾಸಿಟಿವ್ ಬಂದ ಹಿನ್ನೆಲೆ ಆಂತಕ ಸೃಷ್ಟಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗರಾಜ್, ಟೆಕ್ಕಿ ಬೆಂಗಳೂರು ಬಿಟ್ಟು 13 ದಿನಗಳಾಗಿವೆ. ಟೆಕ್ಕಿಯಿಂದ ಯಾರಿಗಾದ್ರು ಸೋಂಕು ಹರಡಿದ್ರೆ ಇಷ್ಟೊತ್ತಿಗಾಗಲೇ ಗೊತ್ತಾಗ್ತಿತ್ತು. ಸೋಂಕು ತಗುಲಿದ ಎರಡನೇ ದಿನದಿಂದ ಎಂಟು ದಿನದೊಳಗೆ ರೋಗದ ಲಕ್ಷಣಗಳು ಗೊತ್ತಾಗುತ್ತದೆ. ಆದರೆ ಇಲ್ಲಿಯವರೆಗೆ ಟೆಕ್ಕಿ ಇದ್ದ ಅಪಾರ್ಟ್ಮೆಂಟ್, ರೂಮ್ ಮೇಟ್, ಕಚೇರಿ ಸಹೋದ್ಯೋಗಿಗಳಿಗೆ ಸೋಂಕು ತಗುಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಾರದ ಹಿಂದೆ ದಿನಕ್ಕೆ ಬರುತ್ತಿದ್ದ 15 ಜನರ ಜಾಗದಲ್ಲಿ 100ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಇವತ್ತು ಇಬ್ಬರನ್ನು ಅಡ್ಮಿಷನ್ ಮಾಡಲಾಗಿದ್ದು, ಫಿಲಿಫೈನ್ಸ್ಗೆ ಹೋಗಿ ಬಂದ ವ್ಯಕ್ತಿ ಮತ್ತು ಒಮಾನ್ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಅವರಿಬ್ಬರ ರಿಪೋರ್ಟ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ರಿಪೋರ್ಟ್ ಬಂದ ಬಳಿಕ ವೈರಸ್ ಬಗ್ಗೆ ತಿಳಿಯಲಿದೆ ಎಂದಿದ್ದಾರೆ.