ಬೆಂಗಳೂರು: ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಹೈಕೋರ್ಟ್ ತನ್ನ ಸಿಬ್ಬಂದಿಗೆ ಬಯೋಮೆಟ್ರಿಕ್ ಬದಲು ಅಟೆಂಡೆನ್ಸ್ ರಿಜಿಸ್ಟರ್ ಪುಸ್ತಕದಲ್ಲಿ ಸಹಿ ಮಾಡುವಂತೆ ಸೂಚಿಸಿ ಸುತ್ತೋಲೆ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂಚನೆ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ಇಂದು ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಹೈಕೋರ್ಟ್ ಪ್ರಧಾನ ಪೀಠ ಇರುವ ಬೆಂಗಳೂರು ಸೇರಿದಂತೆ ಧಾರವಾಡ ಮತ್ತು ಕಲಬುರಗಿ ಸಂಚಾರಿ ಪೀಠಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಜರಾತಿ ಹಾಕಲು ಬಯೋಮೆಟ್ರಿಕ್ ಬಳಸದಂತೆ ಸೂಚಿಸಿದ್ದಾರೆ.
ಈ ಕುರಿತು ತಾವು ಮತ್ತೆ ಸೂಚನೆ ನೀಡುವವರೆಗೂ ಬಯೋಮೆಟ್ರಿಕ್ ಯಂತ್ರದ ಬದಲು ಕಚೇರಿಯಲ್ಲಿರುವ ಹಾಜರಾತಿ ಪುಸ್ತಕದಲ್ಲೇ ಸಹಿ ಮಾಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.