ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಕೊರೊನಾ ಸೋಂಕು ತಗುಲಿದ್ದು, ಕಳೆದ ನಾಲ್ಕು ದಿನದಲ್ಲಿ ರಾಜ್ಯಪಾಲರು ಸೇರಿದಂತೆ ಹಲವರನ್ನು ಸಿಎಂ ಭೇಟಿ ಮಾಡಿದ್ದಾರೆ.
ಸಿಎಂ ಭೇಟಿ ವಿವರ:
ಜುಲೈ 30 ರಂದು ಬೆಂಗಳೂರು ಮೆಟ್ರೋ ರೈಲು ನಿಗಮದಿಂದ ಶಿವಾಜಿನಗರದಲ್ಲಿ ಆಯೋಜಿಸಲಾಗಿದ್ದ ಮೆಟ್ರೋ ಎರಡನೇ ಹಂತದ ಕಂಟೇನ್ಮೆಂಟ್ ರೈಲ್ವೆ ನಿಲ್ದಾಣ ಮತ್ತು ಶಿವಾಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಸುರಂಗ ಮಾರ್ಗ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು. ಕಂದಾಯ ಸಚಿವ ಆರ್. ಅಶೋಕ್ ನಗರಾಭಿವೃದ್ಧಿ, ಸಚಿವ ಭೈರತಿ ಬಸವರಾಜ್ ಹಾಗೂ ಹಿರಿಯ ಅಧಿಕಾರಿಗಳು ಮೆಟ್ರೋ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.
ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಮೀನುಗಾರಿಕೆ ಇಲಾಖೆಯಿಂದ ಆಯೋಜಿಸಲಾಗಿದ್ದ ಮೀನು ಕೃಷಿಕರ ದಿನಾಚರಣೆ ಹಾಗೂ ಮೀನುಗಾರಿಕೆ ಇಲಾಖೆಯ ಐದು ವರ್ಷದ ಮಾಹಿತಿಯನ್ನೊಳಗೊಂಡ ಅಂಕಿ - ಅಂಶಗಳ ಸಂಚಿಕೆ ಬಿಡುಗಡೆ ಮಾಡಲಾಯಿತು. ಕಂದಾಯ ಸಚಿವ ಆರ್. ಅಶೋಕ್, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಶಾಸಕ ರಘುಪತಿ ಭಟ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು
ಜುಲೈ 31 ರಂದು ಕಿಯೋನಿಕ್ಸ್ ವೇರ್ ಹೌಸಿಂಗ್ ಇಂಕ್ಯೂಬೇಶನ್ ಮತ್ತು ಸ್ಟಾರ್ಟ್ ಅಪ್ ಸಂಸ್ಥೆಗಳ ಸೌಲಭ್ಯಕ್ಕಾಗಿ ಎಚ್ಎಸ್ಆರ್ ಲೇಔಟ್ನಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡದ ಉದ್ಘಾಟನೆ ಮಾಡಿದ್ದರು. ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಹೆಚ್.ಎಸ್.ಆರ್.ಲೇಔಟ್ನಿಂದ ಬಂದ ಸಿಎಂ ರಾಜಭವನದಲ್ಲಿ ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟಿಯಾಗಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದರು. ಕೊರೊನಾ ಅಸಾಂಕ್ರಾಮಿಕ ಸ್ಥಿತಿಗತಿ, ನಿಯಂತ್ರಣ ಹಾಗೂ ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು.
ಅಂದು ಸಂಜೆ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಅಧ್ಯಕ್ಷ ಹಿರಿಯ ವಿಜ್ಞಾನಿ ಕಸ್ತೂರಿರಂಗನ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದರು. ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು. ಈಗ ಸಿಎಂಗೆ ಸೋಂಕು ತಗುಲಿರುವ ಹಿನ್ನೆಲೆ ಅವರ ಸಂಪರ್ಕದಲ್ಲಿದ್ದ ಸಚಿವರು ಮತ್ತು ರಾಜ್ಯಪಾಲರಿಗೆ ಕ್ವಾರೆಂಟೈನ್ ಆಗುವ ಪರಿಸ್ಥಿತಿ ಎದುರಾಗಿದೆ.