ಬೆಂಗಳೂರು: ಇಂದು ಹೊಸದಾಗಿ ಹತ್ತು ಜನರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 51ಕ್ಕೆ ತಲುಪಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಕೊರೊನಾ ನಿರ್ವಹಣೆಗೆ ರಚಿಸಲಾಗಿರುವ ಟಾಸ್ಕ್ ಫೋರ್ಸ್ ಸಭೆ ನಡೆಸಲಾಯಿತು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆವರೆಗೆ 41 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇಂದು ಈ ಸಂಖ್ಯೆ 51ಕ್ಕೇರಿದ್ದು, ಇವತ್ತು ರಾತ್ರಿ ಎಷ್ಟಾಗುತ್ತೋ ಗೊತ್ತಿಲ್ಲ. ಅದಕ್ಕಾಗಿ ಚಿಕಿತ್ಸೆ, ಪರೀಕ್ಷೆಗೆ ಎಲ್ಲಿ ವ್ಯವಸ್ಥೆ ಮಾಡಬೇಕು, ವೈದ್ಯಕೀಯ ಸಿಬ್ಬಂದಿ ಹೇಗೆ ಕೆಲಸ ಮಾಡಬೇಕು, ಅವರಿಗೆ ವಿಶ್ರಾಂತಿ ಕೊಡೋದು ಹೇಗೆ? ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ರಾಜ್ಯವ್ಯಾಪಿ ಹೇಗೆ ಮುಂಜಾಗ್ರತೆ ಕೈಗೊಳ್ಳಬೇಕು, ಹೊಸ ಹೊಸ ಕಟ್ಟಡ ಹಾಗೂ ಯಾವ ಯಾವ ಹೋಟೆಲ್ಗಳನ್ನ ಪಡೆಯಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡಿದ್ದೀವಿ ಎಂದರು.
ವಿಕ್ಟೋರಿಯಾ, ಬೋರಿಂಗ್ ಆಸ್ಪತ್ರೆಗಳನ್ನು ಸಿದ್ಧಗೊಳಿಸಬೇಕಾಗಿದೆ. ಕ್ವಾರಂಟೈನ್ಗೆ ಹಾಗೂ ಚಿಕಿತ್ಸೆಗೆ ಪ್ರತ್ಯೇಕವಾಗಿ ಸಿದ್ಧತೆ ಮಾಡಬೇಕಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿದೆ. 21 ದಿನಗಳವರೆಗೆ ಅನೇಕರಿಗೆ ತೊಂದರೆಯಾಗುತ್ತೆ. ಈ ತೊಂದರೆ ಜನರ ರಕ್ಷಣೆಗೋಸ್ಕರ ಅಷ್ಟೇ. ದಿನಸಿ ಖರೀದಿಗೆ ಸಮಯ ನಿಗದಿ ಬಗ್ಗೆ ಸಿಎಸ್ ಹಾಗೂ ಅಧಿಕಾರಿಗಳು ತೀರ್ಮಾನ ಮಾಡಲಿದ್ದಾರೆ ಎಂದು ಸಚಿವರು ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಸಾವನ್ನಪ್ಪಿರುವ ಶಂಕಿತ ಕೊರೊನಾ ಮಹಿಳೆ ರಿಸಲ್ಟ್ ಬರಬೇಕಿದೆ. ಮೊದಲ ವರದಿಯಲ್ಲಿ ಪಾಸಿಟಿವ್ ಬಂದಿದೆ. ಎರಡನೇ ವರದಿ ಬರಬೇಕಿದೆ. ಒಂದು ವೇಳೆ ಕೊರೊನಾದಿಂದ ಮೃತಪಟ್ಟಿದ್ದರೆ ಅಗತ್ಯ ಕ್ರಮ ವಹಿಸಿ ಅಂತ್ಯಸಂಸ್ಕಾರ ಮಾಡ್ತೇವೆ. ಬರ್ನ್ ಮಾಡಿದ್ರೆ ಉತ್ತಮ, ಆದ್ರೆ ಕೆಲವು ಸಮುದಾಯದಲ್ಲಿ ಅವರದ್ದೇ ಆದ ಸಂಪ್ರದಾಯ ಇದೆ. ಹೀಗಾಗಿ ಎಂಟು ಅಡಿ ಆಳದಲ್ಲಿ ಹೂಳಬೇಕು ಎಂದು ಸಚಿವರು ಸಲಹೆ ನೀಡಿದ್ರು.