ಬೆಂಗಳೂರು : ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ, ಮೂರನೇ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನಸ್ವಾಮಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಸ್ನೇಹಮಯಿ ಕೃಷ್ಣ ನೀಡಿದ ದೂರನ್ನ ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಇ.ಡಿ ಅಧಿಕಾರಿಗಳು ಇತ್ತೀಚೆಗೆ ಮುಡಾ ಮಾಜಿ ಅಧ್ಯಕ್ಷ ಮರಿಗೌಡ, ಅಂದಿನ ಆಯುಕ್ತರಾಗಿದ್ದ ನಟೇಶ್ ಸೇರಿದಂತೆ ಹಲವರನ್ನ ವಿಚಾರಣೆ ನಡೆಸಿದ್ದರು. ಮೈಸೂರಿನ ಕೆಸರೆ ಜಾಗವನ್ನ ಮಾಲೀಕರಾಗಿದ್ದ ದೇವರಾಜು ಅವರಿಂದ ಯಾವಾಗ ಖರೀದಿಸಿದ್ದರು?. ಹೇಗೆ ಖರೀದಿ ಮಾಡಲಾಗಿತ್ತು?. ಸಹೋದರಿ ಪಾರ್ವತಿ ಅವರಿಗೆ ಜಮೀನು ದಾನ ಮಾಡಿದ್ದು ಯಾವಾಗ? ಎಂಬುದು ಸೇರಿದಂತೆ ಇನ್ನಿತರ ಅಂಶಗಳ ಬಗ್ಗೆ ಮಲ್ಲಿಕಾರ್ಜುನಸ್ವಾಮಿ ಅವರನ್ನ ವಿಚಾರಣೆ ನಡೆಸಲಾಗಿದೆ ಎಂದು ಇ. ಡಿ ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಮುಡಾ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಮೈಸೂರಿನ ಲೋಕಾಯುಕ್ತ ಅಧಿಕಾರಿಗಳು ಕಳೆದ ಅಕ್ಟೋಬರ್ 10 ರಂದು ಮಲ್ಲಿಕಾರ್ಜುನಸ್ವಾಮಿ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದರು.
ಸಿಎಂ ಹಾಗೂ ಅವರ ಪತ್ನಿಗೂ ನೋಟಿಸ್ ನೀಡುವ ಸಾಧ್ಯತೆ: ಸದ್ಯ ವಿಚಾರಣೆಗೆ ಹಾಜರಾಗಿರುವ ಮಲ್ಲಿಕಾರ್ಜುನಸ್ವಾಮಿ ಅವರಿಂದ ಮೂಲ ಜಮೀನು ಖರೀದಿಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಹೇಳಿಕೆಯನ್ನ ಪಡೆದಿದ್ದಾರೆ. ಮಂದೆ ಸಿಎಂ ಹಾಗೂ ಪತ್ನಿ ಪಾರ್ವತಿ ಅವರನ್ನ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಸಿಎಂ ಮತ್ತು ಕುಟುಂಬಸ್ಥರ ವಿರುದ್ಧ ಅಪಪ್ರಚಾರ ಆರೋಪ ಪ್ರಕರಣ: ವಿಚಾರಣೆ ಎದುರಿಸಿದ ಸ್ನೇಹಮಯಿ ಕೃಷ್ಣ