ಬೆಂಗಳೂರು: ನಗರದಲ್ಲಿ ಇಂದು ಸೋಂಕಿನ ಪ್ರಮಾಣದಲ್ಲಿ ಭಾರಿ ಇಳಿಮುಖ ಕಂಡಿದ್ದು, 4,947 ಜನರಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ. ಇನ್ನು ಮೇ.27 ರಂದು 92,111 ಜನರಿಗೆ ವ್ಯಾಕ್ಸಿನ್ ಹಂಚಿಕೆಯಾಗಿದ್ದು, ನಿನ್ನೆ ಲಕ್ಷಕ್ಕೂ ಮೀರಿ ವಿತರಣೆ ಆಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯ ಆಯುಕ್ತ ಗೌರವ್ ಗುಪ್ತ, ವಾರದ ಬಳಿಕ ಸೋಂಕಿತ ಪ್ರಕರಣಗಳ ಸಂಖ್ಯೆ ಇನ್ನೂ ಇಳಿಕೆಯಾಗಲಿದೆ. ಇಂದು ಕೋವಿಡ್ ಪ್ರಕರಣ ಐದು ಸಾವಿರದವರೆಗೆ ಬಂದಿದ್ದು, ಇಳಿಕೆ ಕಂಡಿದೆ. ಬರುವ ದಿನಗಳಲ್ಲಿ ಸಾಮಾನ್ಯ ಪರಿಸ್ಥಿತಿಗೆ ತಿರುಗಿದಾಗ ಜನರು ಎಚ್ಚರಿಕೆಯಲ್ಲಿಯೇ ಇರಬೇಕು ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೂಡಾ ವ್ಯಾಕ್ಸಿನೇಷನ್ ಚೆನ್ನಾಗಿ ನಡೆಯುತ್ತಿರುವುದರಿಂದ ನಿನ್ನೆಯ ದಿನ 1 ಲಕ್ಷ 10 ಸಾವಿರದಷ್ಟು ವ್ಯಾಕ್ಸಿನೇಷನ್ ಆಗಿದೆ. ಇನ್ನೂ ಹೆಚ್ಷು ಮಾಡಲಾಗುವುದು. 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ವಿತರಣೆ ತಕ್ಷಣವೇ ಆರಂಭಿಸಲಾಗುವುದು ಎಂದರು.
ವ್ಯಾಕ್ಸಿನೇಷನ್ ಹೆಚ್ಚಳ ಪೂರೈಕೆ ಮೇಲೆ ನಿರ್ಧರಿಸಿದೆ. ಕಳೆದ ಐದು ದಿನದಿಂದ ಹೆಚ್ಚು ವ್ಯಾಕ್ಸಿನ್ ಪೂರೈಕೆ ಆಗುತ್ತಿದ್ದು, ಕ್ಯಾಂಪ್ಗಳನ್ನು ಹೆಚ್ಚಳ ಮಾಡಲಾಗ್ತಿದೆ. ಅಪಾರ್ಟ್ಮೆಂಟ್ಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಸಂಘ ಸಂಸ್ಥೆಗಳು ಮಾಡ್ತಿವೆ. ಖಾಸಗಿ ಆಸ್ಪತ್ರೆಗಳ ನೆರವಿನಿಂದ, ಟೈ ಅಪ್ ಆಗಿ ಇದು ನಡೆಯುತ್ತಿದೆ. ಕಾರ್ಪೋರೇಟ್ ಕಂಪನಿಗಳು, ಕಚೇರಿಗಳಲ್ಲೂ ಲಸಿಕಾ ಕ್ಯಾಂಪ್ ಆಯೋಜಿಸಲಾಗಿದೆ ಎಂದರು.
ಮೂರನೇ ಅಲೆಯಲ್ಲಿ 18 ವರ್ಷ ಕೆಳಗಿನವರಿಗೆ ಹೆಚ್ಚಿನ ಕೋವಿಡ್ ಸೋಂಕು ತಗುಲುವ ಬಗ್ಗೆ ವರದಿಗಳಿದ್ದು, ಮಕ್ಕಳಿಗೆ ವಿಶೇಷವಾದ ಆಸ್ಪತ್ರೆ, ಐಸಿಯು ಬೆಡ್ ವ್ಯವಸ್ಥೆ ಮಾಡುವ ಬಗ್ಗೆ ಆ್ಯಕ್ಷನ್ ಪ್ಲಾನ್ ಸಿದ್ಧವಾಗ್ತಿದೆ ಎಂದರು.