ಬೆಂಗಳೂರು: ನಗರದ ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಬಳಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರಿಗೆ ಕೊರೊನಾ ಭಯ ಕಾಡ್ತಿದೆ. ಈಗಾಗಲೇ ಕೊರೊನಾ ವಾರಿಯರ್ ಆಗಿ ಐದಾರು ತಿಂಗಳು ಕೆಲಸ ಮಾಡಿರುವ ಪೊಲೀಸರಿಗೆ ಸದ್ಯ ಕೊರೊನಾ ಸೋಂಕಿನ ಭಯ ಕಾಡ್ತಿದೆ.
ಏಕೆಂದರೆ ಈಗಾಗಲೇ ಮೂವರು ಮೃತ ಆರೋಪಿಗಳ ಪೈಕಿ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಘಟನೆ ನಡೆದ ನಂತರ ಸುಮಾರು 150ಕ್ಕೂ ಹೆಚ್ಚು ಮಂದಿಯನ್ನ ಪೊಲೀಸರು ಬಂಧಿಸಿದ್ದು, ಈ ಆರೋಪಿಗಳಿಗೆ ಕೊರೊನಾ ಇದೆಯೇ ಎಂಬ ಭಯ ಪೊಲೀಸರಲ್ಲಿದೆ. ಬಂಧಿಸಿದ ಆರೋಪಿಗಳನ್ನ ತನಿಖೆಯ ದೃಷ್ಟಿಯಿಂದ ತನಿಖಾಧಿಕಾರಿಗಳು ಗುರುತಿಸಿದ ಜಾಗದಲ್ಲಿ ಇಟ್ಟುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ಬಂಧಿತ ಆರೋಪಿಗಳ ಕೊರೊನಾ ಪರೀಕ್ಷೆ ನಡೆಸಿದ ನಂತರ ಪೊಲೀಸರು ಮಾಸ್ಕ್, ಗ್ಲೌಸ್, ಫೇಸ್ ಸೀಲ್ಡ್ ಹಾಕಲಿದ್ದಾರೆ. ಹಾಗೆ ಅಗತ್ಯವಿದ್ದರೆ ಪಿಪಿಇ ಕಿಟ್ ಹಾಕಿ ತನಿಖೆ ನಡೆಸಲಿದ್ದಾರೆ. ಇನ್ನು ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಬಳಿ ದಾಳಿ ಮಾಡಿದ ಆರೋಪಿಗಳ ಪೈಕಿ ಕೆಲವರಿಗೆ ಕೊರೊನಾ ಸೋಂಕು ಇದ್ದರೂ ಸಹ ನಾವು ಧೃತಿಗೆಡದೇ ಕೆಲಸ ಮಾಡುತ್ತೇವೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.