ಬೆಂಗಳೂರು : ಕೋವಿಡ್ -19 ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ, ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಆ. 7 ರವರೆಗೆ ಕಾಲಮಿತಿ ನಿಯಮಗಳ ಅನ್ವಯ ರಜೆ ವಿಸ್ತರಿಸಲಾಗಿದೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆದೇಶ ಹೊರಡಿಸಿದ್ದಾರೆ. ಅದರಂತೆ ಈ ಹಿಂದೆ ಮಾ. 26ರಂದು ರಾಜ್ಯ ನ್ಯಾಯಾಲಯಗಳಿಗೆ ಕಾಲಮಿತಿ ಅನ್ವಯ ಘೋಷಿಸಿದ್ದ ರಜೆ ಅವಧಿಯನ್ನು ಆ. 7 ರವರೆಗೆ ವಿಸ್ತರಿಸಲಾಗಿದೆ ಎಂದು ನೋಟಿಫಿಕೇಷನ್ ನಲ್ಲಿ ತಿಳಿಸಿದ್ದಾರೆ.
ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇವಲ ತುರ್ತು ಪ್ರಕರಣಗಳ ವಿಚಾರಣೆಯನ್ನು ನಡೆಸಲು ಅವಕಾಶ ಕಲ್ಪಿಸಿರುವ ಹೈಕೋರ್ಟ್, ಪರಿಸ್ಥಿತಿ ಸುಧಾರಿಸದೇ ಇರುವುದರಿಂದ ಕಾಲಮಿತಿಯನ್ನು ವಿಸ್ತರಿಸಲಾಗಿದೆ.
ಕೋರ್ಟ್ ಗಳಿಗೆ ಅರ್ಜಿ, ಮನವಿಗಳನ್ನು ಸಲ್ಲಿಸಲು ನಿಗದಿತ ಕಾಲಮಿತಿ ಇರುತ್ತದೆ. ಅದರಂತೆ ನಿಗದಿತ ಅವಧಿಯೊಳಗೆ ಅರ್ಜಿ, ಮನವಿ, ಮೇಲ್ಮನವಿಗಳನ್ನು ಕಕ್ಷೀದಾರರು ಸಲ್ಲಿಸಬೇಕಿದ್ದು, ಕೆಲ ಸಂದರ್ಭಗಳಲ್ಲಿ ಇದಕ್ಕೆ ವಿನಾಯಿತಿ ಇರುತ್ತದೆ. ಈ ವಿನಾಯಿತಿಯನ್ನು ಕಾಲಮಿತಿ ಕಾಯ್ದೆ 1963ರ ಸೆಕ್ಷನ್ 4ರ ಪ್ರಕಾರ ವಿಸ್ತರಿಸಿ ಇದೀಗ ಹೈಕೋರ್ಟ್ ಆದೇಶಿಸಿದೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಕಕ್ಷೀದಾರರು ನ್ಯಾಯಾಲಯಗಳಿಗೆ ಓಡಾಡಲು ಸಮಸ್ಯೆ ಇರುವ ಕಾರಣ ಕಾಲಮಿತಿ ವಿಸ್ತರಿಸಲಾಗಿದೆ.