ಬೆಂಗಳೂರು: ಬಂಧಿತ ಆರೋಪಿಗಳು ಹಾಗೂ ವಿಚಾರಣಾಧೀನ ಕೈದಿಗಳನ್ನು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರುಪಡಿಸುವ ಸಂದರ್ಭಗಳಲ್ಲಿ ನ್ಯಾಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೊರೊನಾ ಸೋಂಕು ಹಬ್ಬುವುದನ್ನು ತಪ್ಪಿಸಲು ಹೈಕೋರ್ಟ್ ಹೊಸ ತಂತ್ರ ರೂಪಿಸಿದೆ. ಅದಕ್ಕೆಂದೇ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ "ರಿಮ್ಯಾಂಡ್ ಕೋರ್ಟ್" ಸ್ಥಾಪಿಸಿದೆ.
ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ನಿಯಮಗಳ ಪ್ರಕಾರ ಪೊಲೀಸರು ಆರೋಪಿಯನ್ನು ಬಂಧಿಸಿದಾಗ ಮತ್ತು ವಿಚಾರಣಾಧೀನ ಕೈದಿಯನ್ನು ಅಗತ್ಯ ಸಂದರ್ಭಗಳಲ್ಲಿ ನ್ಯಾಯಾಲಯದ ಎದುರು ಖುದ್ದು ಹಾಜರುಪಡಿಸುತ್ತಾರೆ. ಇದೇ ರೀತಿ ಹಿಂದೆ ಮೇಯೊ ಹಾಲ್ ಕೋರ್ಟ್ಗೆ ಪೊಲೀಸರು ಹಾಜರುಪಡಿಸಿದ್ದ ಆರೋಪಿಯೋರ್ವನಿಗೆ ಕೊರೊನಾ ಸೋಂಕು ತಗುಲಿದ್ದು ಬೆಳಕಿಗೆ ಬಂದಿತ್ತು. ಕೋರ್ಟ್ಗೆ ಹಾಜರುಪಡಿಸಿದ ನಂತರ ಆರೋಪಿತನ ವೈದ್ಯಕೀಯ ವರದಿ ಲಭ್ಯವಾಗಿ ಅದರಲ್ಲಿ ಸೋಂಕಿರುವುದು ದೃಢವಾಗಿತ್ತು. ನಂತರ ಎರಡು ದಿನ ಮೇಯೊ ಹಾಲ್ ಕೋರ್ಟ್ ಸಂಕೀರ್ಣವನ್ನೇ ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಯಿತು.
ಈ ಹಿನ್ನೆಲೆ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಅನುಕೂಲವಾಗುವಂತೆ ಹೈಕೋರ್ಟ್ ಪ್ರತ್ಯೇಕವಾಗಿ ರಿಮ್ಯಾಂಡ್ ಕೋರ್ಟ್ ಸ್ಥಾಪಿಸಿದೆ. ಅದರಂತೆ ಇನ್ನು ಮುಂದೆ ಪೊಲೀಸರು, ಆರೋಪಿಗಳು ಮತ್ತು ವಿಚಾರಣಾಧೀನ ಕೈದಿಗಳನ್ನು ವಸಂತ ನಗರದ ಗುರುನಾನಕ್ ಭವನದಲ್ಲಿ ಸ್ಥಾಪಿಸಿರುವ ರಿಮ್ಯಾಂಡ್ ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ನಂತರ ಸಂಬಂಧಪಟ್ಟ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅಥವಾ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಈ ರಿಮ್ಯಾಂಡ್ ಕೋರ್ಟ್ನಲ್ಲಿ ಕಲಾಪ ನಡೆಸಿ ಬಂಧಿತ ಆರೋಪಿಗಳ ಹಾಗೂ ವಿಚಾರಣಾಧೀನ ಕೈದಿಗಳ ಖುದ್ದು ಹಾಜರಾತಿಯನ್ನು ದಾಖಲಿಸಿಕೊಳ್ಳಲಿದ್ದಾರೆ. ಈ ವೇಳೆ ಕೋವಿಡ್-19 ಮಾರ್ಗಸೂಚಿಗಳಂತೆ ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಿಮ್ಯಾಂಡ್ ಕೋರ್ಟ್ ಕಲಾಪಕ್ಕೆ ಮಾಡಿರುವ ವ್ಯವಸ್ಥೆಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ, ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಹಾಗೂ ಬಿ.ವೀರಪ್ಪ ಅವರು ಪರಿಶೀಲನೆ ನಡೆಸಿದ್ದಾರೆ.