ಬೆಂಗಳೂರು: ಕೊರೊನಾ ಭೀತಿ ದೇವಾಲಯಗಳಿಗೂ ತಟ್ಟಿದ್ದು, ಮುಜರಾಯಿ ಇಲಾಖೆ ರಾಜ್ಯದ ದೇವಾಲಯಗಳ ಪ್ರವೇಶಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.
ದೇವಸ್ಥಾನದಲ್ಲಿ ಅರ್ಚಕರು, ಸಿಬ್ಬಂದಿಗೆ ಮಾತ್ರ ಪೂಜೆಗೆ ಅವಕಾಶ ನೀಡಲಾಗಿದ್ದು, ದೇವಾಲಯ ಆವರಣದ ಒಳಗೆ ಹೋಮ, ಪೂಜೆ ಮಾಡಿಕೊಳ್ಳಬೇಕು. ಭಕ್ತಾದಿಗಳನ್ನು ಸೇರಿಸದೆ ಹೋಮ-ಹವನ ಮಾಡಿಕೊಳ್ಳಬಹುದಾಗಿದೆ. ಮುಂದಿನ ಆದೇಶದವರೆಗೆ ಈ ನಿರ್ಬಂಧ ಹೇರಲಾಗಿದೆ.
ಭಕ್ತಾದಿಗಳು, ಸಾರ್ವಜನಿರು ಸೇರದಂತೆ ಪೂಜೆ ಮಾಡಿಕೊಳ್ಳಬಹುದಾಗಿದ್ದು, ಜನಸಂದಣಿ ಇಲ್ಲದ ರೀತಿಯಲ್ಲಿ ಪೂಜೆಗೆ ಸೂಚನೆ ನೀಡಲಾಗಿದೆ. ಜಾತ್ರೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವ, ಪ್ರಸಾದ ವಿತರಣೆ, ತೀರ್ಥ ವಿತರಣೆ, ದಾಸೋಹ, ದೇವರ ದರ್ಶನ, ದೇವಾಲಯಗಳಲ್ಲಿನ ವಸತಿ ಗೃಹ, ಅತಿಥಿ ಗೃಹಗಳನ್ನು ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಹಂಚಿಕೆ ಮಾಡುವುದನ್ನು ನಿಷೇಧಿಸಲಾಗಿದೆ.
ಶಾಸಕರ ಭವನಕ್ಕೂ ನಿರ್ಬಂಧ:
ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಶಾಸಕರ ಭವನಕ್ಕೂ ನಿರ್ಬಂಧ ಹೇರಲಾಗಿದೆ. ಶಾಸಕರ ಭವನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ಹೇರಿ ಆದೇಶ ಹೊರಡಿಸಲಾಗಿದೆ. ಮುಂದಿನ ಸೂಚನೆವರೆಗೂ ನಿರ್ಬಂಧ ವಿಧಿಸಲು ವಿಧಾನಸಭೆ ಕಾರ್ಯದರ್ಶಿಯಿಂದ ಶಾಸಕರ ಭವನದ ಭದ್ರತಾ ವಿಭಾಗಕ್ಕೆ ಸೂಚನೆ ನೀಡಲಾಗಿದೆ.