ಬೆಂಗಳೂರು: ಸರ್ಕಾರದ ನಿರ್ದೇಶನಗಳಿಂದ ಮದುವೆ ಸಮಾರಂಭಗಳು ನಡೆಯುತ್ತಿಲ್ಲ. ಹೀಗಿರುವಾಗ ಕಲ್ಯಾಣ ಮಂಟಪಗಳನ್ನ ಕ್ಯಾರಂಟೈನ್ ಕೇಂದ್ರಗಳನ್ನಾಗಿ ಉಪಯೋಗಿಸಿದರೆ ನಮಗೆ ನಷ್ಟವಾಗಲಿದೆ ಎಂದು ಕರ್ನಾಟಕ ಕಲ್ಯಾಣ ಮಂಟಪಗಳ ಸಂಘದ ಉಪಾಧ್ಯಕ್ಷ ವಾಸನ್ ಹೇಳಿದ್ದಾರೆ.
ಈ ಕುರಿತಂತೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಬಿಬಿಎಂಪಿ ಆಯುಕ್ತ ಬಿ.ಎಸ್. ಅನಿಲ್ ಕುಮಾರ್ ಅವರು, ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕಲ್ಯಾಣ ಮಂಟಪಗಳನ್ನು ಕ್ಯಾರಂಟೈನ್ ಕೇಂದ್ರಗಳನ್ನಾಗಿ ಉಪಯೋಗಿಸುತ್ತೇವೆ ಎಂದಿದ್ದರು. ಇದರಿಂದ ಕಲ್ಯಾಣ ಮಂಟಪಗಳಿಗೆ ಆರ್ಥಿಕವಾಗಿ ದೊಡ್ಡ ಹೊಡೆತ ಬೀಳಲಿದ್ದು, ಮಂಟಪಗಳನ್ನ ಬಾಡಿಗೆಗೆ ಪಡೆಯಲು ಯಾರೂ ಇಚ್ಛಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರದ್ದಾದ ಸಮಾರಂಭಗಳ ಕುರಿತು ಮಾತನಾಡಿ, ಜನರು ಬಾಡಿಗೆ ಪಡೆದ ಮಂಟಪಗಳನ್ನು ಒಂದು ವರ್ಷದೊಳಗೆ ಅವರಿಗೆ ಅಥವಾ ಪರಿಚಿತರಿಗೆ ಮಂಟಪಗಳನ್ನು ನೀಡುತ್ತೇವೆ. ನಮಗೂ ಪಡೆದ ಹಣದಿಂದ ಇತರೆ ಖರ್ಚು ಇರುತ್ತದೆ ಎಂದು ವಾಸನ್ ಹೇಳಿದರು.
ಒಂದು ಮದುವೆ ಅಥವಾ ಶುಭ ಸಮಾರಂಭಗಳು ನಡೆದರೆ ನೇರವಾಗಿ ಹಾಗೂ ಪರೋಕ್ಷವಾಗಿ 400 ಜನರಿಗೆ ಕೆಲಸ ದೊರಕುತ್ತದೆ. ಆಮಂತ್ರಣ ಪತ್ರ ಮುದ್ರಣ, ಹೂ ವಿನ್ಯಾಸಕರು, ಅಡುಗೆಯವರು, ವಾಲಗ, ಪುರೋಹಿತರು ಸೇರಿದಂತೆ ಕಾಲೇಜ್ ವಿದ್ಯಾರ್ಥಿಗಳು ಖರ್ಚಿಗೆ ಸಂಜೆಯ ವೇಳೆ ಸಮಾರಂಭದಲ್ಲಿ ಸಹಾಯಕ್ಕೆ ಬರುತ್ತಾರೆ.
ಇದಿಷ್ಟೇ ಅಲ್ಲದೆ 2,000 ಜನರು ಸೇರುವ ಸಮಾರಂಭವೆಂದರೆ ಇಂಧನ ಖರೀದಿಯು ಆಗಲಿದೆ. ಇದರಿಂದ ಉದ್ಯೋಗ ಸೃಷ್ಟಿಯ ಜೊತೆಗೆ ಸರ್ಕಾರಕ್ಕೂ ಆದಾಯ ತರುತ್ತದೆ. ಸಮಾರಂಭಗಳ ಮೇಲೆ ನಿರ್ಬಂಧ ಹೇರಿಕೆಯಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ತಿಳಿಸಿದರು.
ಮದುವೆಗೆ ಆಗುವ ಚರ್ಚು: ಅಂದಾಜಿನ ಪ್ರಕಾರ ಮಧ್ಯಮ, ಮೇಲ್ವರ್ಗದ ಜನರು ಒಂದು ಮದುವೆಗೆ ಒಡವೆ ಖರೀದಿ ಹೊರೆತುಪಡಿಸಿ ಕಡಿಮೆ ಎಂದರು 10 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಮಂಟಪದ ಬಾಡಿಗೆ ಸರಾಸರಿ 2 ಲಕ್ಷದಿಂದ 10 ಲಕ್ಷದವರೆಗೂ ಖರ್ಚು ಆಗಲಿದೆ.
ರಾಜ್ಯದಲ್ಲಿ ಸುಮಾರು 3 ಸಾವಿರ ಕಲ್ಯಾಣ ಮಂಟಪಗಳಿದ್ದು, ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ 35ಕ್ಕೂ ಹೆಚ್ಚು ಮಂಟಪಗಳಿವೆ. 3 ತಿಂಗಳಿಂದ ಇವರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಬೇಡಿಕೆಗಳು: ಶುಭ ಸಮಾರಂಭಗಳಿಗೆ ಪಾತ್ರರಾಗುವ ಕಲ್ಯಾಣ ಮಂಟಪಗಳು, ಕೊರೊನಾ ಸೋಂಕಿನಿಂದ ಆರ್ಥಿಕವಾಗಿ ನಲುಗಿವೆ. ಎಲ್ಲಾ ಉದ್ಯಮದಂತೆ ಶೇ. 20% ಲಾಭಾಂಶ ಪಡೆಯುತ್ತಿದ್ದ ಈ ಉದ್ಯಮ ಈಗ ಖಾಲಿಯಾಗಿದೆ. ಮಾಸಗಳ ಅನುಗುಣವಾಗಿ ನಡೆಯುವ ಈ ಉದ್ಯಮ, ವರ್ಷದಲ್ಲಿ 180 ದಿನ ಮಾತ್ರ ವಹಿವಾಟನ್ನು ನಿರೀಕ್ಷಿಸುತ್ತದೆ.
ಕಲ್ಯಾಣ ಮಂಟಪಗಳ ಬೇಡಿಕೆಗಳು
1. ಕಲ್ಯಾಣ ಮಂಟಪಗಳನ್ನು ಕ್ಯಾರಂಟೈನ್ ಕೇಂದ್ರಗಳನ್ನಾಗಿಸುವ ನಿರ್ಧಾರ ಹಿಂಪಡೆಯಬೇಕು.
2. ಕಂದಾಯ ತೆರಿಗೆಗೆ 3 ತಿಂಗಳ ವಿನಾಯಿತಿ ನೀಡಬೇಕು.
3. ವಿದ್ಯುತ್ ದರವನ್ನ ಕೈಬಿಡಬೇಕು.
4. ಸಮಾರಂಭಗಳಲ್ಲಿ 50 ಜನರ ಸೇರುವ ಮಿತಿಯನ್ನ ಹೆಚ್ಚಿಸಿ, ಕನಿಷ್ಠ 200 ಜನರಿಗೆ ವಿನಾಯಿತಿ ನೀಡಬೇಕು.
ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಅವರು 'ಈಟಿವಿ ಭಾರತ'ದ ಮೂಲಕ ಕರ್ನಾಟಕ ಕಲ್ಯಾಣ ಮಂಟಪಗಳ ಸಂಘದ ಉಪಾಧ್ಯಕ್ಷ ವಾಸನ್ ಸರ್ಕಾರಕ್ಕೆ ಮನವಿ ಮಾಡಿದರು.