ಬೆಂಗಳೂರು: ಕೊರೊನಾ ಆರಂಭವಾದಾಗಿನಿಂದ ಎಲ್ಲರ ಜೀವನ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಿವೆ. ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದವರು, ತಮ್ಮೂರುಗಳಿಗೆ ಹಿಂದಿರುಗಿದ್ದಾರೆ. ಕೆಲವರಿಗೆ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಸಿಕ್ಕರೆ, ಇನ್ನೂ ಕೆಲವರು ಸರ್ಕಾರ ನೀಡುವ ಉದ್ಯೋಗಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿ ಜೀವನೋಪಾಯಕ್ಕೆ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ.
ಬಯಲು ಸೀಮೆ, ಕರಾವಳಿ, ಮಲೆನಾಡಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಕೂಲಿ ಕಾರ್ಮಿಕರಿಗೆ ಕೂಲಿ ಹೆಚ್ಚು ಇದೆ. ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಸ್ವಲ್ಪ ಕಡಿಮೆ ಇದೆ. ಇನ್ನೂ ಕಲಬುರಗಿ, ರಾಯಚೂರು, ಹುಬ್ಬಳ್ಳಿ- ಧಾರವಾಡ, ಕೊಪ್ಪಳ, ಬೀದರ್ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಲ್ಲೂ ಹೇಳಿಕೊಳ್ಳುವಷ್ಟು ಕೂಲಿ ಸಿಗುವುದಿಲ್ಲ. ಕೆಲಸವನ್ನಾಧರಿಸಿ 150 ರೂಪಾಯಿಯಿಂದ 300 ರೂಪಾಯಿಯವರೆಗೆ ಕೂಲಿಯಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚು ಹಣ ಸಿಗುತ್ತದೆ ಎಂಬ ಕಾರಣಕ್ಕಾಗಿ ದಿನಗೂಲಿಗಿಂತ ಗುತ್ತಿಗೆ ಕೆಲಸ ಮಾಡುವವರೇ ಹೆಚ್ಚು. ಇನ್ನು ಕೆಲವೆಡೆ ಬೆಳಗ್ಗೆ ಎಂಟು ಗಂಟೆಯಿಂದ ಸಂಜೆಯ ತನಕ ಕೆಲಸ ಮಾಡುವ ಪರಿಪಾಠವೂ ಇದೆ. ಕೃಷಿ ಕೆಲಸಕ್ಕೆ ಕೂಲಿ ಆಳುಗಳು ಸಿಗುತ್ತಿಲ್ಲ ಎಂಬ ರೈತರ ಗೋಳೂ ಕೆಲವು ಪ್ರದೇಶಗಳಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
ಮನರೇಗಾ ಯೋಜನೆ ಜಾರಿಗೆ ಬಂದ ನಂತರ ಕಾರ್ಮಿಕರ ಕೊರತೆ ಇಲ್ಲವೆಂದು ಸರ್ಕಾರ ಹೇಳಿದೆ. ಈ ಯೋಜನೆಯಿಂದ ಕಾರ್ಮಿಕರ ಕೂಲಿಯೂ ಹೆಚ್ಚಳವಾಗಿದೆ. ಮನರೇಗಾ ಯೋಜನೆಯಲ್ಲಿ ಒಬ್ಬರಿಗೆ ದಿನಕ್ಕೆ 155 ರೂ. ಕೂಲಿ ನಿಗದಿಪಡಿಸಲಾಗಿದೆ. ಆದರೆ ಈ ಯೋಜನೆಯಡಿ ಚಾಮರಾಜನಗರ, ಉತ್ತರ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಲ್ಲಿ ಅನುಕೂಲವಾಗಿದೆ. ಆದರೆ, ಹಳೆ ಮೈಸೂರು, ಮಲೆನಾಡು, ಕರಾವಳಿ ಹಾಗೂ ಮಧ್ಯ ಕರ್ನಾಟಕದಲ್ಲಿ ಅಷ್ಟಾಗಿ ಪರಿಣಾಮಕಾರಿಯಾಗಿಲ್ಲ ಎಂಬುದು ಬಹುತೇಕ ರೈತರ ಅಭಿಪ್ರಾಯವಾಗಿದೆ.
ರಾಜ್ಯದಲ್ಲಿ ಕೃಷಿ ಕೂಲಿ ಕಾರ್ಮಿಕರ ಸಂಖ್ಯೆ 49.99 ಲಕ್ಷ ಇದೆ. ಅಸಂಘಟಿತ ವಲಯದಲ್ಲಿ 1.29 ಕೋಟಿ ಜನರಿದ್ದರೆ, ಸಂಘಟಿತ ವಲಯದಲ್ಲಿ 18.60 ಲಕ್ಷ ಮಂದಿ ಕಾರ್ಮಿಕರಿದ್ದಾರೆ. ಕೋವಿಡ್ ಹೊಡೆತದಿಂದ ಶೇ.80ರಷ್ಟು ಕಾರ್ಮಿಕರು ಈಗಾಗಲೇ ವಾಪಸ್ ತಮ್ಮ ತಮ್ಮ ಹಳ್ಳಿಗಳಿಗೆ ಬಂದಿದ್ದಾರೆ. ಅವರು ಊರಲ್ಲೇ ಕೃಷಿ ಕೂಲಿ ಮಾಡಿಕೊಂಡು ಜೀವನ ನಡೆಸಲು ಮುಂದಾಗಿದ್ದಾರೆ. ಹೀಗಾಗಿ, ಇನ್ನೂ ಸ್ವಲ್ಪ ಮಟ್ಟಿಗೆ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಬಗೆಹರಿಯಬಹುದೆಂಬ ವಿಶ್ವಾಸ ರೈತರದ್ದು.