ಬೆಂಗಳೂರು: ಕೋವಿಡ್-19 ತುರ್ತು ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡಿರುವ ಹೈಕೋರ್ಟ್, ಮಂಡ್ಯ ಜಿಲ್ಲೆಯ ಬೆಳ್ಳೂರು ಬಳಿಯ ಎಸ್ಸಿ-ಎಸ್ಟಿ ಕಾಲನಿಯಲ್ಲಿರುವ ಮದ್ಯದಂಗಡಿಯನ್ನು ಸ್ಥಳಾಂತರಿಸಲು ಸೆಪ್ಟೆಂಬರ್‌ವರೆಗೆ ಕಾಲಾವಕಾಶ ಕಲ್ಪಿಸಿದೆ.
ಬಾರ್ ಮಾಲಿಕರಾದ ಅನಿತಾ ಎಂಬುವರು ತಮ್ಮ ಮದ್ಯದಂಗಡಿಯನ್ನು ಸ್ಥಳಾಂತರಿಸಲು ಅಬಕಾರಿ ಇಲಾಖೆ ಹೊರಡಿಸಿರುವ ಆದೇಶ ಪ್ರಶ್ನಿಸಿ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ತೆರವಿಗೆ ಕಾಲಾವಕಾಶ ನೀಡಿ ಆದೇಶ ಹೊರಡಿಸಿದ್ದಾರೆ.
ಅರ್ಜಿದಾರರಾದ ಅನಿತಾ ತಮ್ಮ ಮದ್ಯದಂಗಡಿಯನ್ನು ಸ್ಥಳಾಂತರಿಸುವಂತೆ ಅಬಕಾರಿ ಇಲಾಖೆ 2020ರ ಫೆ.18ರಂದು ಆದೇಶಿಸಿದೆ. ಆದರೆ ಕೊರೊನಾ ಸೋಂಕು ಹರಡಿದ ಹಿನ್ನೆಲೆ ಮತ್ತು ಲಾಕ್‌ಡೌನ್ ಘೋಷಿಸಿದ ಪರಿಣಾಮ ಮದ್ಯದಂಗಡಿ ಸ್ಥಳಾಂತರಿಸಲು ಕಷ್ಟವಾಗಿದೆ. ಹೀಗಾಗಿ ಸ್ಥಳಾಂತರಕ್ಕೆ ತಡೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಅರ್ಜಿದಾರರ ಮನವಿ ಪರಿಗಣಿಸಿದ ಪೀಠ, ಕೋವಿಡ್-19 ಪರಿಸ್ಥಿತಿಯನ್ನು ಕಡೆಗಣಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟು ಮದ್ಯದಂಗಡಿಯ ಸ್ಥಳಾಂತರಕ್ಕೆ 2020ರ ಸೆಪ್ಟೆಂಬರ್ 15ರವರೆಗೆ ಕಾಲಾವಕಾಶ ನೀಡಿದೆ.
ಈ ಅವಧಿಯೊಳಗೆ ಬಾರ್ ಸ್ಥಳಾಂತರಿಸುವ ಕುರಿತು ದೃಢೀಕರಿಸಿದ ಪ್ರಮಾಣ ಪತ್ರವನ್ನು ಮುಂದಿನ 10 ದಿನಗಳ ಒಳಗೆ ಹೈಕೋರ್ಟ್ ರಿಜಿಸ್ಟ್ರಾರ್ಗೆ ಸಲ್ಲಿಸಬೇಕು. ಒಂದೊಮ್ಮೆ ಕೋರ್ಟ್ ನಿಗದಿಪಡಿಸಿರುವ ಸಮಯದೊಳಗೆ ಸ್ಥಳಾಂತರ ಮಾಡದಿದ್ದರೆ ಅಬಕಾರಿ ಅಧಿಕಾರಿಗಳು ಮದ್ಯದಂಗಡಿಗೆ ಬೀಗಹಾಕಿ, ಅರ್ಜಿದಾರರ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಬಹುದು ಎಂದು ಆದೇಶಿಸಿದೆ.