ಬೆಂಗಳೂರು: ಕೋವಿಡ್ 2ನೇ ಅಲೆ ಅಬ್ಬರ ಹೆಚ್ಚಾಗಿರುವ ಹಿನ್ನೆಲೆ, ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ವೆಚ್ಚದ ಮೇಲೆ ನಿಯಂತ್ರಣ ಮಾಡಲು ಮುಂದಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹಣೆ ಮೇಲಾಗಿರುವ ಪರಿಣಾಮ, ಕೇಂದ್ರದಿಂದ ಸರಿಯಾಗಿ ಸಿಗದ ಸ್ಪಂದನೆಯಿಂದಾಗಿ ರಾಜ್ಯದ ಆರ್ಥಿಕ ವ್ಯವಸ್ಥೆ ತತ್ತರಿಸಿತ್ತು.
ಎರಡನೇ ಅಲೆ ಬಂದಿರುವುದರಿಂದ ಮತ್ತೆ ಅದೇ ರೀತಿಯ ಪರಿಸ್ಥಿತಿ ಬರಬಹುದೆಂಬ ಅತಂಕದಿಂದಾಗಿ ಹಣಕಾಸು ವರ್ಷದ ಆರಂಭದಲ್ಲಿಯೇ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಂಡಿದೆ.
ಕಳೆದ ವರ್ಷ ವಿವಿಧ ಇಲಾಖೆಗಳ ಅನುದಾನದಲ್ಲಿ ಸುಮಾರು 19,775 ಕೋಟಿ ರೂ. ಕಡಿತ ಮಾಡಲಾಗಿತ್ತು. ಆದ್ದರಿಂದ ಈ ವರ್ಷದ ಆರಂಭದಲ್ಲಿಯೇ ಸೂಕ್ತ ಎಚ್ಚರಿಕೆ ವಹಿಸಿದೆ. ವೆಚ್ಚದ ಮೇಲೆ ಮೇಲೆ ನಿಗಾ ವಹಿಸಬೇಕೆಂದು ಆರ್ಥಿಕ ಇಲಾಖೆ ಎಲ್ಲ ಇಲಾಖೆಗಳಿಗೂ ಸೂಚನೆ ನೀಡಿದೆ ಎಂದು ಗೊತ್ತಾಗಿದೆ.
2021-22 ಕ್ಕೆ 15133 ಕೋಟಿ ರೂ. ರಾಜಸ್ವ ಕೊರತೆ ನಿರೀಕ್ಷೆ ಇದ್ದು, ರಾಜ್ಯದ ಜಿಡಿಪಿಯ ಅಂದಾಜು 17,02,227 ಕೋಟಿ ರೂ. ನಷ್ಟು ಇದೆ. ಕಳೆದ ವರ್ಷ ಶೇ.14 ರಷ್ಟು ಬಂಡವಾಳ ವೆಚ್ಚ ಕಡಿಮೆಯಾಗಿದೆ. ರಾಜ್ಯ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷ 2,46,207 ಕೋಟಿ ರೂ. ವೆಚ್ಚ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದೆ.
ಅದರಲ್ಲಿ ರಾಜಸ್ಥ ವೆಚ್ಚ 1,87,405 ಕೋಟಿ ರೂ.ಗಳಾದರೆ, ಬಂಡವಾಳ ವೆಚ್ಚ 44,237 ಕೋಟಿ ರೂ.ಗಳಾಗಿದ್ದು, ಸಾಲ ಮರು ಪಾವತಿಗೆ 14,565 ಕೋಟಿ ರೂ. ಹೋಗುತ್ತದೆ. ತೆರಿಗೆ ಸಂಗ್ರಹಣೆಯನ್ನೂ ಕಳೆದ ಬಜೆಟ್ ಗಿಂತ ಕಡಿಮೆ ಅಂದಾಜು ಮಾಡಲಾಗಿದೆ.
ಇದೀಗ ಕೊರೊನಾ ಉಪಟಳ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕೆ ಕಡಿವಾಣ ಹಾಕಲು ಸರ್ಕಾರ, ಹದಿನಾಲ್ಕು ದಿನಗಳ ಕಾಲ ಲಾಕ್ಡೌನ್ ಮಾದರಿಯ ಕೊರೊನಾ ಜನತಾ ಕರ್ಪ್ಯೂ ಜಾರಿಗೆ ತಂದಿದ್ದು, ಇದು ಇಂದು ರಾತ್ರಿಯಿಂದ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ.
ಇದರಿಂದಾಗಿ ಹಣದುಬ್ಬರ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ. ಕಳೆದ ವರ್ಷದಂತೆ ಯಾವ್ಯಾವ ವರ್ಗಗಳಿಗೆ ನೆರವು ನೀಡಬೇಕಾಗುತ್ತದೋ ಎಂಬ ಭೀತಿಯಂತೂ ಸರ್ಕಾರಕ್ಕೆ ಬಂದಿದೆ. ಇದೇ ಕಾರಣಕ್ಕೆ ವೆಚ್ಚದ ಮೇಲೆ ನಿಗಾ ವಹಿಸುವ ನಿರ್ಧಾರವನ್ನು ಸರ್ಕಾರ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಬಾರಿ ವರ್ಷದ ಕೊನೆಯ ಖರ್ಚುಗಳಿಗೆ ಕಡಿವಾಣ ಹಾಕಿ ಪ್ರತಿ ತಿಂಗಳು ಸಮಾನವಾಗಿ ಹಣ ಬಿಡುಗಡೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಸರ್ಕಾರ ಇಲಾಖೆಗಳಿಗೆ ನೀಡಿದೆ ಎನ್ನಲಾಗಿದೆ. ಸರ್ಕಾರ ಬಹುತೇಕ ಇಲಾಖೆಗಳಿಗೆ ಕಳೆದ ಹಣಕಾಸು ವರ್ಷಕ್ಕಿಂತ ಅನುದಾನ ಕಡಿಮೆ ಮಾಡಿದೆ.
ಬಜೆಟ್‌ನಲ್ಲಿ ಘೋಷಣೆಯಾಗಿರುವ ಆರು ವಲಯಗಳಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 1,231 ಕೋಟಿ ರೂ. ಕಡಿಮೆ ಮಾಡಿದೆ. ಸರ್ವೋದಯ ಕ್ಷೇಮಾಭಿವೃದ್ಧಿ ವಲಯಕ್ಕೆ 9,943 ಕೋಟಿ ರೂ. ಕಡಿಮೆ ಆಗಿದೆ. ಆರ್ಥಿಕ ಅಭಿವೃದ್ಧಿ ವಲಯಕ್ಕೆ 3,203 ಕೋಟಿ ರೂ., ಬೆಂಗಳೂರು ಅಭಿವೃದ್ಧಿ ವಲಯಕ್ಕೆ 977 ಕೋಟಿ ರೂ., ಸಂಸ್ಕೃತಿ ಮತ್ತು ಪರಂಪರೆ ವಲಯಕ್ಕೆ 1,907 ಕೋಟಿ ರೂ. ಕಡಿಮೆ ಮಾಡಿದೆ. ಆದರೆ, ಆಡಳಿತ ಸುಧಾರಣೆ ವಲಯಕ್ಕೆ 42,325 ಕೋಟಿ ರೂ. ಹೆಚ್ಚಿಗೆ ನೀಡಿದೆ.
ಸರ್ಕಾರ ಆಡಳಿತ ಸುಧಾರಣೆಗೆ ಏನೇನು ಕ್ರಮಗಳನ್ನು ವಲಯಗಳಿಗೆ ಕಳೆದ ಬಾರಿಗಿಂತ ಕಡಿಮೆ ಮಾಡಿರುವುದರಿಂದ ವೆಚ್ಚದ ಮೇಲೆ ಸರ್ಕಾರ ನಿಯಂತ್ರಣವನ್ನಿಟ್ಟುಕೊಂಡು ದುಂದು ವೆಚ್ಚ ಆಗದಂತೆ ನೋಡಬೇಕಾಗಿದೆ.
ಯಾವುದೇ ಯೋಜನೆಗೆ ನಿಗದಿತ ಮೊತ್ತ ಮೀರುವಂತಿಲ್ಲ. ಇಲಾಖೆಗಳ ಮುಖ್ಯಸ್ಥರು ನಿಗಾವಹಿಸಬೇಕು. ಕಾಲಕಾಲಕ್ಕೆ ಜಾರಿಯಾಗುವ ಮಿತವ್ಯಯ ಆದೇಶಗಳನ್ನು ಜಾರಿಗೆ ತರಬೇಕು. ಉಳಿತಾಯದಿಂದ ಮರು ಹೊಂದಾಣಿಕೆ ಮಾಡಬಹುದೆಂದು ಅಧಿಕ ವೆಚ್ಚ ಮಾಡುವಂತಿಲ್ಲ. ಈ ಇಲಾಖೆಗಳು ಹೊಸ ಸೇವೆಗೆ ನೇರವಾಗಿ ವೆಚ ಮಾಡುವಂತಿಲ್ಲ. ಹಣಕಾಸು ಇಲಾಖೆ ಅನುಮತಿ ಕಡ್ಡಾಯ ಎಂದು ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.