ಬೆಂಗಳೂರು: ಕೊರೊನಾ ಸೋಂಕು ಹೆಚ್ಚಿರುವ ರಾಜ್ಯದ ಎಂಟು ನಗರಗಳಲ್ಲಿ ನಾಳೆಯಿಂದ ಜಾರಿಯಾಗಲಿರುವ ಕೊರೊನಾ ಕರ್ಫ್ಯೂಗೆ ನೂತನ ಮಾರ್ಗಸೂಚಿ ಬಿಡುಗಡೆಗೊಂಡಿದೆ.
ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಕೊರೊನಾ ಕರ್ಫ್ಯೂ ಜಾರಿ ಸಂಬಂಧ ನೂತನ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದಾರೆ. ನೂತನ ಮಾರ್ಗ ಸೂಚಿ ಪ್ರಕಾರ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕಲ್ಪಿಸಲಿದೆ. ನೂತನ ಮಾರ್ಗಸೂಚಿ ಅನ್ವಯ ಪೊಲೀಸ್ ಇಲಾಖೆ ಕ್ರಮಗಳನ್ನ ಕೈಗೊಳ್ಳಲಿದೆ.
ನೂತನ ಮಾರ್ಗಸೂಚಿ ಹೀಗಿದೆ:
- ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮತ್ತು ಅವರ ಸಹಾಯಕರಿಗೆ ವೈದ್ಯಕೀಯ ಸೇವೆಗೆ ಸಂಚಾರಕ್ಕೆ ಅನುಮತಿ
- ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವಂತಹ ಎಲ್ಲ ಕಾರ್ಖಾನೆ, ಕಂಪನಿಗಳು, ಸಂಸ್ಥೆಗಳು ಯಥಾರೀತಿ ಕಾರ್ಯ ನಿರ್ವಹಿಸಲು ಅನುಮತಿ, ಆದರೆ ಸಂಬಂಧಿಸಿದ ಕಾರ್ಮಿಕರು, ನೌಕರರು ಕೊರೊನಾ ಕರ್ಫ್ಯೂ ಅವಧಿಗೆ ಮುನ್ನವೇ ಕರ್ತವ್ಯದಲ್ಲಿ ಹಾಜರಿರಬೇಕು
- ವೈದ್ಯಕೀಯ ಸೇವೆಗಳನ್ನು ಮತ್ತು ತುರ್ತು ಚಟುವಟಿಕೆಗೆ ಮಾತ್ರ ಅನುಮತಿ ನೀಡಲಾಗಿದ್ದು, ಇನ್ನುಳಿದ ಎಲ್ಲ ವಾಣಿಜ್ಯ ಚಟುವಟಿಕೆಗೆ ನಿರ್ಬಂಧ
- ಅತ್ಯವಶ್ಯಕ ಸೇವೆ ಒದಗಿಸುವಂತಹ ವಾಹನಗಳು,ಸರಕು ಸಾಗಾಣಿಕೆ ವಾಹನಗಳು, ಹೋಂ ಡೆಲಿವರಿ, ಇ-ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ
- ರಾತ್ರಿ ವೇಳೆ ಬಸ್, ರೈಲು ಹಾಗೂ ವಿಮಾನದ ದೂರ ಪ್ರಯಾಣಕ್ಕೆ ಅನುಮತಿಸಲಾಗಿದೆ. ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣಗಳಿಂದ ಮನೆಗೆ ಅಧಿಕೃತ ಟಿಕೆಟ್ ಆಧಾರದ ಮೇಲೆ ಆಟೋ ಅಥವಾ ಕ್ಯಾಬ್ ಇತ್ಯಾದಿಗಳ ಮೂಲಕ ಸಂಚರಿಸಲು ಅನುಮತಿ