ಬೆಂಗಳೂರು: ಕೊರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ಕಬಂದ ಬಾಹುವನ್ನ ವಿಸ್ತರಿಸುತ್ತಿದ್ದು, ವೈರಸ್ ಹರಡದಂತೆ ತಡೆಯಲು ರಾಜ್ಯ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಇದರ ಜೊತೆಗೆ ಇದೀಗ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಕೊರೊನಾ ವೈರಸ್ ಹರಡದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸುವ ಮೂಲಕ ವೈರಸ್ ವಿರುದ್ಧ ಹೋರಾಟದಲ್ಲಿ ತೊಡಗಿದ್ದಾರೆ.
ಕೊರೊನಾ ವೈರಸ್ ಇದೀಗ ದೇಶದಾದ್ಯಂತ ಹರಡುತ್ತಿರುವುದರಿಂದಾಗಿ ರಾಜ್ಯದಲ್ಲೂ ವೈರಸ್ ನಿಧಾನವಾಗಿ ಹೆಚ್ಚುತ್ತಿದೆ. ಹೀಗಾಗಿ ಕೆ.ಆರ್.ಪುರ ಸಂಚಾರಿ ಪೊಲೀಸರು ವಾಹನ ಸವಾರರಿಗೆ ವೈರಸ್ ತಡೆಯಲು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಪಾಠ ಮಾಡಿದ್ದಾರೆ.
ಪೊಲೀಸರು ಪ್ರಾತಿಕ್ಷತೆಯ ಮೂಲಕ ಮಾಮೂಲಿನಂತೆ ಕೈಗಳನ್ನು ತೊಳೆಯವುದಕ್ಕೂ ವೈರಸ್ ಹರಡದಂತೆ ಕೈಗಳನ್ನು ತೊಳೆಯುವುದಕ್ಕೂ ಹೆಚ್ಚು ವ್ಯತ್ಯಾಸವಿದ್ದು, ಅವುಗಳ ನಡುವಿನ ವ್ಯತ್ಯಾಸವನ್ನು ತಿಳಿಸುವ ಮೂಲಕ ಕೊರೊನಾ ವೈರಾಣು ವಿರುದ್ಧ ವಿಶಿಷ್ಟ ಹೋರಾಟಕ್ಕೆ ಸಾಕ್ಷಿಯಾದರು.