ಬೆಂಗಳೂರು: ಕೊರೊನಾ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಪೊಲೀಸರು ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದು, ಟ್ರಾಫಿಕ್ ಪೊಲೀಸರಿಗೂ ಮಹಾಮಾರಿ ಹರಡುವ ಆತಂಕ ಶರುವಾಗಿದೆ.
ಲಾಕ್ಡೌನ್ ಸಡಿಲಿಕೆಯಾಗಿದ್ದು, ವಾಹನಗಳ ಸಂಚಾರ ಆರಂಭವಾಗಿದೆ. ಜನರು ನಿಯಮ ಉಲ್ಲಂಘನೆ ಮಾಡದಂತೆ ನೋಡಿಕೊಳ್ಳಬೇಕಾದರೆ ಸಂಚಾರಿ ಪೊಲೀಸರು ಅಗತ್ಯವಾಗಿ ಬೇಕೆ ಬೇಕು. ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಸೋಂಕು ತಗುಲುತ್ತಿದ್ದು, ಅಧಿಕಾರಿಗಳು ರಸ್ತೆಗಿಳಿದು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಇಲ್ಲಿಯವರೆಗೆ ಸುಮಾರು 87 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಟ್ರಾಫಿಕ್ನ ಪಶ್ಚಿಮ ವಿಭಾಗದಲ್ಲಿ 35 ಪ್ರಕರಣ, ಪೂರ್ವ ವಲಯದಲ್ಲಿ 49 ಪ್ರಕರಣ, ಉತ್ತರ ವಿಭಾಗದಲ್ಲಿ 3 ಪ್ರಕರಣ ಪತ್ತೆಯಾಗಿದ್ದು, ಇವರೆಲ್ಲಾ ಬೌರಿಂಗ್, ಇಎಸ್ಐ, ರಾಜಾಜಿನಗರ, ರಾಜೀವ್ ಗಾಂಧಿ, ಸಿವಿ ರಾಮನ್ ನಗರ,ಜಯನಗರ, ಹಜ್ ಭವನ, ಆರ್ಎಸ್ ಆಶ್ರಮ, ಜಿಐಎಂಎಸ್ ಆಸ್ಪತ್ರೆ, ಇಡಿ ಆಸ್ಪತ್ರೆ, ಜಿ.ಕೆ.ವಿಕೆ, ಪೀಪಲ್ ಟ್ರೀ ಹೀಗೆ ವಿವಿಧ ಆಸ್ಪತ್ರೆ ಹಾಗೂ ಕೋವಿಡ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಾಫಿಕ್ ಹೆಚ್ಚುವರಿ ಆಯುಕ್ತ ರವೀಕಾಂತೆಗೌಡ ಅವರು ಸಿಬ್ಬಂದಿ ಆರೋಗ್ಯದ ದೃಷ್ಟಿಯಿಂದ ವಾಹನ ಸಂಚಾರ ದಟ್ಟಣೆಯಾದಾಗ ಮಾತ್ರ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ವಾಹನ ಸವಾರರು ಹೆಲ್ಮೆಟ್ ಹಾಕದೆ, ಸೀಟ್ ಬೆಲ್ಟ್ ಧರಿಸಿದೆ, ತ್ರಿಬಲ್ ರೈಡಿಂಗ್, ಸಿಗ್ನಲ್ ಜಂಪ್ನಂತಹ ಪ್ರಕರಣಗಳನ್ನು ಸಿಸಿಟಿವಿ ದೃಶ್ಯಗಳನ್ನಾಧರಿಸಿ ದಂಡ ಹಾಕುವಂತೆ ಆದೇಶಿಸಿದ್ದಾರೆ ಎನ್ನಲಾಗುತ್ತಿದೆ.
ಇಲ್ಲಿಯವರೆಗೆ ಸುಮಾರು 395 ಮಂದಿ ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 190 ಪೊಲೀಸರು ಗುಣಮುಖರಾಗಿದ್ದಾರೆ. ಇನ್ನು 200 ಪೊಲೀಸರು ಐಸೋಲೇಷನ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕಿತರ ಸಂಪರ್ಕದಲ್ಲಿದ್ದ 500 ಜನ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ.
ಕೊರೊನಾ ವಾರಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಲ್ಲಿ ದಿನೇ ದಿನೇ ಕೊರೊನಾ ಸೋಂಕು ಹಬ್ಬುತ್ತಿದ್ದು, ಎಲ್ಲಾರು ಮುಂಜಾಗ್ರತೆಯಿಂದ ಇರುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.