ಬೆಂಗಳೂರು: ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಸದ್ಯದಲ್ಲಿ ಸದನದಲ್ಲಿ ಮಂಡಿಸಲಾಗುತ್ತದೆ. ಯಾವ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡಲ್ಲ. ಎಪಿಎಂಸಿಗಳನ್ನು ಮುಚ್ಚಲೂ ಬಿಡುವುದಿಲ್ಲ. ಹಾಗಾಗಿ ರೈತರು ಆತಂಕ ಪಡಬೇಕಿಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಹಿತಕ್ಕಾಗಿ ಎಪಿಎಂಸಿ ಕಾಯ್ದೆ ರೂಪಿಸಲಾಗಿದೆ. ರೈತರ ಅನುಕೂಲಕ್ಕಾಗಿಯೇ ಬೆಳೆ ಹಕ್ಕು ಎಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದಿದೆ. ಅದನ್ನು ಕಾಯ್ದೆ ಮಾಡಲಾಗುತ್ತಿದೆ. ಆದರೆ, ಈ ಹಂತದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎನ್ನುವ ಕೂಗು ರೈತ ಸಂಘಟನೆಗಳಿಂದ ವ್ಯಕ್ತವಾಗುತ್ತಿದೆ. ಅಪಪ್ರಚಾರ ನಡೆಸಲಾಗುತ್ತಿದೆ. ಆದರೆ ವಾಸ್ತವವಾಗಿ ಇದು ರೈತಪರ ಕಾಯ್ದೆಯಾಗಿದೆ ಎಂದು ಸಮರ್ಥಿಸಿಕೊಂಡರು.
ಕೇಂದ್ರದ ಕಾಯ್ದೆಯಂತೆ ರೈತ ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎನ್ನುವ ಕಾಯ್ದೆ ಜಾರಿಗೆ ತರಲಾಗುತ್ತದೆ. ಎಲ್ಲೆಲ್ಲಿ ಎಷ್ಟು ದರ ಎಂದು ಪ್ರಕಟಿಸಲಾಗುತ್ತದೆ. ಆ ದರಕ್ಕೆ ಮಾರಾಟ ಮಾಡಲು ಅವಕಾಶವಿದೆ. ಪಾನ್ ಕಾರ್ಡ್ ಇದ್ದವರು ರೈತರ ಬೆಳೆ ಖರೀದಿ ಮಾಡಬಹುದು. ಇದರಿಂದ ಎಪಿಎಂಸಿಗೆ ಯಾವುದೇ ನಷ್ಟ ಇಲ್ಲ ಎಂದರು.
ಈವರೆಗೂ ಶೇ.1.5 ರಷ್ಟು ಸೆಸ್ ಸಂಗ್ರಹ ಮಾಡಲಾಗುತ್ತಿತ್ತು. ಈಗ 1 ರೂ.ಗೆ ನಿಗದಿಪಡಿಸಲಾಗಿದೆ. ಮತ್ತೆ ಕ್ಯಾಬಿನೆಟ್ಗೆ ತಂದು 35 ಪೈಸೆ ನಿಗದಿಪಡಿಸಲಾಗಿದೆ. ಇದರಿಂದ 120 ಕೋಟಿ ಆದಾಯ ಸಂಗ್ರಹವಾಗಲಿದೆ. ಎಪಿಎಂಸಿ ನಿರ್ವಹಣೆಗೆ ಕೊರತೆಯಾದಲ್ಲಿ ಸರ್ಕಾರವೇ ಉಳಿದ ವೆಚ್ಚವನ್ನು ಭರಿಸಲಿದೆ ಎಂದರು.
ಎಪಿಎಂಸಿಗಳು ಮುಚ್ಚಿಹೋಗಲಿವೆ, ರೈತರಿಗೆ ಅನ್ಯಾಯವಾಗಲಿದೆ ಎನ್ನುವುದು ಸುಳ್ಳು. ಎಪಿಎಂಸಿ ಮುಚ್ಚಲ್ಲ. ಉತ್ತಮ ಭೂಮಿಯಲ್ಲಿ ಎಪಿಎಂಸಿ ತಲೆ ಎತ್ತಿವೆ. ಸಹಕಾರ ಇಲಾಖೆಯಿಂದ ಎಪಿಎಂಸಿಯಲ್ಲೇ ಬೆಳೆ ಮಾರಾಟಕ್ಕೆ ಏನೆಲ್ಲ ಹೊಸದಾಗಿ ಸೌಲಭ್ಯ ಬೇಕೋ ಅದೆಲ್ಲವನ್ನೂ ಕಲ್ಪಿಸುವ ಚಿಂತನೆ ಮಾಡಿದ್ದೇವೆ. ಎಪಿಎಂಸಿಗೆ ಹೆಚ್ಚಿನ ಸೌಕರ್ಯ ಕೊಡಬೇಕು. ರೈತರು ಎಪಿಎಂಸಿಯಲ್ಲೇ ಮಾರಾಟ ಮಾಡಲು ಏನೆಲ್ಲ ಮಾಡಬೇಕು ಎನ್ನುವ ಕುರಿತು ಸಭೆ ನಡೆಸಲಾಗುತ್ತದೆ. ಎಲ್ಲ ಎಪಿಎಂಸಿ ನಿರ್ದೇಶಕರನ್ನು ಕರೆಸಿ ಸಭೆ ನಡೆಸಿ ಅಭಿವೃದ್ಧಿ ಮಾಡಲು ಚಾಲನೆ ನೀಡಲಾಗುತ್ತದೆ ಎಂದರು.
ರೈತರು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಕಲ್ಪಿಸಿದ ಕೇಂದ್ರದ ಕಾಯ್ದೆಯನ್ನು ನಾವು ಸ್ವಾಗತ ಮಾಡುತ್ತೇವೆ. ರೈತರಿಗೆ ಅನುಕೂಲ ಮಾಡುವ ಕಾಯ್ದೆ ಇದು. ಇದನ್ನು ನಾವೂ ಕೂಡ ರಾಜ್ಯದಲ್ಲಿ ಅನುಷ್ಠಾನ ಮಾಡಲಿದ್ದೇವೆ. ಯಾವ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡಲ್ಲ ಎಂದರು.
ಕಾನೂನು ಸಚಿವರ ಜೊತೆ ನಾನು ಚರ್ಚೆ ಮಾಡಿದ್ದೇನೆ. ಡಿ.ಆರ್ ಪಾಟೀಲ್ ನೇತೃತ್ವದ ಸಮಿತಿ ಜೊತೆ ಸಭೆ ನಡೆಸಿದ್ದೇನೆ. ಸೆಸ್ 35 ಪೈಸೆ ಇರುವುದನ್ನು ಹೆಚ್ಚು ಮಾಡಿ ಎಂದು ಪ್ರಸ್ತಾವನೆ ಕೊಟ್ಟಿದೆ. ಅದನ್ನು ಸಿಎಂ ಜೊತೆ ಚರ್ಚೆ ನಡೆಸಲಾಗಿದೆ. ಕಾಯ್ದೆ ತರುವ ವೇಳೆ ಎಲ್ಲವನ್ನೂ ಪರಿಶೀಲನೆ ಮಾಡಿ ಸೇರಿಸಿ ಕಾಯ್ದೆ ತರಲಾಗುತ್ತದೆ ಎಂದರು.
162 ಎಪಿಎಂಸಿಗಳಲ್ಲಿ ಯಾವ ಮಾರುಕಟ್ಟೆಯಲ್ಲಿ ಹೆಚ್ಚಿನ ದರಕ್ಕೆ ಬೆಳೆ ಮಾರಾಟ ಆಗಲಿದೆಯೋ ಅದನ್ನೇ ಫಿಕ್ಸ್ ಮಾಡಲಾಗುತ್ತದೆ. ಬಹುರಾಷ್ಟ್ರೀಯ ಕಂಪನಿಗಳು ರೈತರಿಗೆ ಹಣಪಾವತಿ ಮಾಡದೇ ಇದ್ದರೆ ಅಂತಹ ಕಂಪನಿಗಳ ಪರವಾನಗಿ ಅಮಾನತು ಮಾಡುವ ಅಧಿಕಾರ ಎಪಿಎಂಸಿ ಬೋರ್ಡ್ಗೆ ಇದೆ. ಹಾಗಾಗಿ ರೈತರು ಆತಂಕಪಡಬೇಕಿಲ್ಲ ಎಂದರು.
ನಿನ್ನೆ ನಡೆದ ರೈತರ ಪ್ರತಿಭಟನೆ ಜಾಗಕ್ಕೆ ನಾನು ಹೋಗಿಲ್ಲ. ಆದರೆ, ಕಾರ್ಮಿಕ ಸಚಿವರು ಹೋಗಿದ್ದರು. ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬಾಕಿ ಹಣ ಬರಬೇಕಿರುವ ವಿಷಯ ಪ್ರಮುಖವಾಗಿ ಇದ್ದ ಕಾರಣ ಸಿಎಂ ಸೂಚನೆಯಂತೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮತ್ತು ಇಲಾಖೆ ಆಯುಕ್ತರು ಹೋಗಿ ಮಾತುಕತೆ ನಡೆಸಿದ್ದಾರೆ. ಸಿಎಂ ಯಾರಿಗೆ ಹೇಳುತ್ತಾರೋ ಅವರು ಹೋಗಬೇಕು. ಸಿಎಂ ನನಗೆ ಹೇಳಲಿಲ್ಲ. ಹಾಗಾಗಿ ನಾನು ಹೋಗಿಲ್ಲ ಅಷ್ಟೆ. ನಾನು ಸಹಕಾರ ಸಚಿವ. ಎಲ್ಲ ವಿಚಾರದಲ್ಲೂ ಸಹಕಾರ ಇದೆ. ಯಾವ ಸಚಿವರ ಜೊತೆಯಲ್ಲೂ ಹೋಗಲೂ ನಮಗೆ ತೊಂದರೆ ಇಲ್ಲ ಎಂದು ರೈತರ ಭೇಟಿಗೆ ಹೋಗದಿರುವುದನ್ನ ಸಮರ್ಥಿಸಿಕೊಂಡರು.
ಈಗ ಬಿಪಿಗೆ ಬಂದಿದ್ದೇನೆ. ಬಿಜೆಪಿ ಶಾಸಕನಾಗಿದ್ದೇನೆ. ಸಚಿವನಾಗಿದ್ದೇನೆ. ಕಾಂಗ್ರೆಸ್ನಲ್ಲಿದ್ದಾಗ ಕಾಂಗ್ರೆಸ್ ಸಂಸ್ಕೃತಿ, ಬಿಜೆಪಿಯಲ್ಲಿರುವಾಗ ಬಿಜೆಪಿ ಸಂಸ್ಕೃತಿಗೆ ಒಗ್ಗಿದ್ದೇನೆ ಎಂದರು.