ಬೆಂಗಳೂರು : ಮಾಸಿಕ ಗೌರವ ಧನ ಹಾಗೂ ಆರೋಗ್ಯ ಸಂರಕ್ಷಣಾ ಸಾಮಗ್ರಿಗಳ ವಿತರಣೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಎಐಟಿಯುಸಿ ವತಿಯಿಂದ ಕೆಲಸ ಸ್ಥಗಿತಗೊಳಿಸಿ ಕೆಜಿ ರಸ್ತೆಯ ಕಂದಾಯ ಭವನ ಹಾಗೂ ನಗರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಲಾಯಿತು.
ಎಲ್ಲಾ ಕಾರ್ಯಕರ್ತೆಯರ ಆರೋಗ್ಯ ತಪಾಸಣೆ, ಪಾಸಿಟಿವ್ ಬಂದಿರುವ ಎಲ್ಲರಿಗೂ ಸಂಪೂರ್ಣ ಉಚಿತ ಚಿಕಿತ್ಸೆ, ಸಂಪೂರ್ಣ ಗೌರವಧನ, ಮಾಸ್ಕ್, ಹ್ಯಾಂಡ್‌ಗ್ಲೌಸ್, ಫೇಸ್ ಶೀಲ್ಡ್ ಮತ್ತು ಇತ್ಯಾದಿಗಳನ್ನು ಸಮರ್ಪಕವಾಗಿ ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮಿ, 4ನೇ ದಿನದ ಪ್ರತಿಭಟನೆಯಿಂದಾಗಿ, 42 ಸಾವಿರ ಜನ ಒಂದೇ ಸಲ ಕೆಲಸ ಸ್ಥಗಿತಗೊಳಿಸಿರುವುದರಿಂದ ಹಳ್ಳಿ ಹಳ್ಳಿಗಳಲ್ಲಿ ಸಾಕಷ್ಟು ಸಮಸ್ಯೆ ಆಗ್ತಿದೆ. ಸೋಂಕು ಹೆಚ್ಚಾಗಿ ಹಬ್ಬುತ್ತಿದೆ. ಆದರೂ ಸರ್ಕಾರದಿಂದ ಕೇಳೋರಿಲ್ಲ, ಹೇಳೋರಿಲ್ಲ. ಹೀಗಾಗಿ ಪ್ರತಿ ಪಂಚಾಯತ್ ಮಟ್ಟದಲ್ಲೂ ಪ್ರತಿಭಟನೆ ನಡೆಸಿ ಮನವಿ ಕೊಡಲಾಗಿದೆ ಎಂದು ತಿಳಿಸಿದರು.
ಈವರೆಗೆ ಅಧಿಕಾರಿಗಳ ಜೊತೆ ಕೇವಲ ಒಂದು ಸಭೆ ಆಗಿದೆ. ಸಚಿವರ ಗಮನಕ್ಕೆ ತರುತ್ತೇವೆ ಅಂತಾ ಹೇಳಿದ್ದಾರೆ. ಆದರೆ, ಇನ್ನೂ ಯಾವ ಪ್ರಯೋಜನವೂ ಆಗಿಲ್ಲ. ಆಶಾ ಕಾರ್ಯಕರ್ತೆಯರ ಗೈರಿನಿಂದಾಗಿ ಸೋಂಕಿತರ ಟ್ರ್ಯಾಕಿಂಗ್, ಕ್ವಾರಂಟೈನ್ ಕೆಲಸ ನಡೆಯದೆ ಸಾಕಷ್ಟು ಸಮಸ್ಯೆಯಾಗ್ತಿದೆ ಎಂದು ವಿವರಿಸಿದರು.