ಬೆಂಗಳೂರು: ಬಿಬಿಎಂಪಿ ಮೇಯರ್ ಹಾಗೂ ಆಯುಕ್ತ ಅನಿಲ್ ಕುಮಾರ್ ನಡುವೆ ಅಸಮಾಧಾನ ಉಂಟಾಗಿತ್ತು. ಈ ಬಗ್ಗೆ ಮೇಯರ್ ಸರ್ಕಾರಕ್ಕೆ ದೂರು ಕೂಡಾ ಸಲ್ಲಿಸಿದ್ದರು. ಈ ಹಿಂದೆ ಇದ್ದ ಮುಸುಕಿನ ಗುದ್ದಾಟ ಮತ್ತೆ ಬಯಲಾಗಿದೆ.
ಈ ಬಗ್ಗೆ ಮೇಯರ್ ಗೌತಮ್ ಕುಮಾರ್ ಮಾತನಾಡಿ, ನನ್ನ ಹಾಗೂ ಆಯುಕ್ತ ಅನಿಲ್ ಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದ್ರೇ ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಕೋವಿಡ್ 19 ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಹಾಗಾಗಿ ಮಾಹಿತಿ ನೀಡುವಂತೆ ನಾನು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದೆ. ಕೋವಿಡ್ 19 ಬಗ್ಗೆ ಪ್ರತಿ ವಾರ್ಡ್ ಬಿಬಿಎಂಪಿ ಸದಸ್ಯರಿಗೂ ಮಾಹಿತಿ ನೀಡುವಂತಹದ್ದು ಅಧಿಕಾರಿಗಳ ಕರ್ತವ್ಯ. ಅಲ್ಲದೇ ಈ ಬಗ್ಗೆ ಪತ್ರದ ಮೂಲಕ ಉತ್ತರ ನೀಡಿರೋ ಬಿಬಿಎಂಪಿ ಕಮಿಷಿನರ್ ಅನಿಲ್ ಕುಮಾರ್, ಬಿಬಿಎಂಪಿ ಕೌನ್ಸಿಲ್ ಸೆಕ್ರೆಟರಿಗೆ ಮಾಹಿತಿ ಕಳಿಸೋದಾಗಿ ಹೇಳಿದ್ದಾರೆ. ಆದ್ರೆ ಕೌನ್ಸಿಲ್ ಸೆಕ್ರೆಟರಿಗೆ ಮಾಹಿತಿ ನೀಡೋದ್ರಿಂದ ಏನು ಪ್ರಯೋಜನ ಅಂತ ಅಸಮಾಧಾನ ವ್ಯಕ್ತಪಡಿಸಿದರು. ನಮಗೆ ಯಾವ ಅಧಿಕಾರಿ ಸಹ ಮಾಹಿತಿ ನೀಡುತ್ತಿಲ್ಲ, ನಮ್ಮೆಲ್ಲ ಜನಪ್ರತಿನಿಧಿಗಳಯ ಮಾಹಿತಿಗಾಗಿ ಕೇವಲ ಆರೋಗ್ಯ ಇಲಾಖೆಯ ಅಪಡೇಟ್ ನೆಚ್ಚಿಕೊಂಡಿದ್ದೇವೆ. ಯಾವ ವಾರ್ಡ್ ಗಳಲ್ಲಿ ಏನು ಕ್ರಮಗಳನ್ನು ಅಧಿಕಾರಿಗಳು ತೆಗೆದುಕೊಳ್ತಾ ಇದ್ದಾರೆ ಅನ್ನೋ ಮಾಹಿತಿ ಬಿಬಿಎಂಪಿ ಚುನಾಯಿತ ಪ್ರತಿನಿಧಿಗಳಗೆ ದೊರೆಯಬೇಕು ಅನ್ನೋದು ನನ್ನ ಉದ್ದೇಶ ಹಾಗಾಗಿ ಪತ್ರ ಬರೆದೆ ಎಂದಿದ್ದಾರೆ.
ಮಾಸ್ಕ್ ಹಾಗೂ ಸೀಲ್ ಡೌನ್ ಏರಿಯಾಗಳ ಕಸದ ಸಮಸ್ಯೆ ಬಗ್ಗೆ ಬಿಬಿಎಂಪಿ ಮೇಯರ್ ಪ್ರತಿಕ್ರಿಯಿಸಿ, ಸಾರ್ವಜನಿಕರು ಮಾಸ್ಕ್ ಗಳನ್ನು ತ್ಯಾಜ್ಯದಲ್ಲಿ ಹಾಕುವ ವಿಚಾರವಾಗಿ ತ್ಯಾಜ್ಯ ಸಂಗ್ರಹಣೆ ಬಹಳ ಕಷ್ಟವಾಗುತ್ತಿದೆ. ಹಾಗಾಗಿ ಸಾರ್ವಜನಿಕರು ಬಟ್ಟೆಯ ಮಾಸ್ಕ್ ಗಳನ್ನು ಬೆಂಕಿಗೆ ಹಾಕಿ ಸುಡುವಂತಹದ್ದು ಅಥವಾ ಮಣ್ಣಿನಲ್ಲಿ ಹೂಳುವ ಕೆಲಸ ಮಾಡಬೇಕು. ಕಸದೊಂದಿಗೆ ಕೊಡುವುದಾದ್ರೇ ಹಸಿ ಕಸ ಒಣ ಕಸಕ್ಕೆ ಮಿಕ್ಸ್ ಮಾಡ್ದೆ ಪ್ರತ್ಯೇಕವಾಗಿ ನೀಡಬೇಕು . ಈ ಬಗ್ಗೆ ಜನರನ್ನು ಜಾಗೃತಿಗೊಳಿಸಲು ಜಾಹೀರಾತು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಸೀಲ್ಡೌನ್ ಆದ ಏರಿಯಾಗಳಲ್ಲಿಯೂ ಪಿಪಿಇ ಕಿಟ್ ಧರಿಸಿ ಕಸ ವಿಲೇವಾರಿ ಮಾಡುವಂತೆ ತಿಳಿಸಲಾಗಿದೆ ಎಂದರು.
ಇನ್ನು ಎರಡು ತಿಂಗಳಿಗೊಮ್ಮೆಯಾದರೂ ಕೌನ್ಸಿಲ್ ಸಭೆ ನಡೆಸುವುದು ಅನಿವಾರ್ಯವಾದ್ದರಿಂದ, ಇಂದು ಕೌನ್ಸಿಲ್ ಸಭೆ ಕರೆಯಲಾಗಿತ್ತು. ಆದ್ರೆ ಒಂಬತ್ತು ಮಂದಿ ಮಾತ್ರ ಕೌನ್ಸಿಲರ್ಸ್ ಬಂದ ಕಾರಣ ಕೋರಂ ಕೊರತೆಯಿಂದಾಗಿ ಸಭೆ ಮುಂದೂಡಲ್ಪಟ್ಟಿತ್ತು. ಮೂಡಲಪಾಳ್ಯದ ಹೆರಿಗೆ ಆಸ್ಪತ್ರೆ ಇಂದು ಅಥವಾ ನಾಳೆಯಿಂದ ಕಾರ್ಯಪ್ರಾರಂಭಿಸಲಿದೆ. ಇತ್ತೀಚೆಗೆ ಮೂಡಲಪಾಳ್ಯ ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ ಹೊರ ರೋಗಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ವೈದ್ಯರು ಹಾಗೂ ನರ್ಸ್ ಸೇರಿ ಒಟ್ಟು 10 ಮಂದಿಯನ್ನು ಕ್ವಾರೆಂಟೈನ್ ಮಾಡಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 8 ಮಂದಿಯ ವರದಿ ನೆಗೆಟಿವ್ ಬಂದಿದೆ. ಇನ್ನಿಬ್ಬರ ವರದಿ ನಾಳೆಯ ಒಳಗಾಗಿ ಬರಲಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಹೊರ ರೋಗಿಯಾಗಿದ್ದ ಹಿನ್ನೆಲೆಯಲ್ಲಿ ಅನಾಹುತ ತಪ್ಪಿದೆ. ಹೀಗಾಗಿ ಹೆರಿಗೆ ಆಸ್ಪತ್ರೆಯನ್ನು ಪುನರಾರಂಭಿಸಲು ನಿರ್ಧಾರಿಸಲಾಗಿದೆ