ನೆಲಮಂಗಲ : ಸರ್ಕಾರಿ ಶಾಲಾ-ಕಾಲೇಜಿನ ವಿದ್ಯಾರ್ಥಿನಿಯರಿಗಂತಲೇ ಬೆಂಗಳೂರು ಉತ್ತರ ವಿಭಾಗದ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಸುಸಜ್ಜಿತವಾದ ಶೌಚಾಲಯವನ್ನು ನೆಲಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ನಿರ್ಮಿಸಿಕೊಟ್ಟಿದ್ದಾರೆ.
ಬಹುತೇಕ ಸರ್ಕಾರಿ ಶಾಲಾ ಕಾಲೇಜುಗಳ ಸ್ಥಿತಿ ಅವ್ಯವಸ್ಥೆಯ ಆಗರವಾಗಿದೆ. ಕೆಲವು ಬಾರಿ ಶೌಚಾಲಯದ ಕೊರತೆ, ಅವ್ಯವಸ್ಥೆಯಿಂದ ವಿದ್ಯಾರ್ಥಿನಿಯರ ಪಾಡು ಹೇಳತೀರದು. ಇದನ್ನೆಲ್ಲ ಪರಿಗಣನೆಗೆ ತೆಗೆದುಕೊಂಡ ಬೆಂಗಳೂರು ಉತ್ತರ ವಿಭಾಗದ ಇನ್ನರ್ ವ್ಹೀಲ್ ಕ್ಲಬ್ ತಂಡ ನೆಲಮಂಗಲ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಹೆಣ್ಣು ಮಕ್ಕಳ ಉಪಯೋಗಕ್ಕಾಗಿ ಸುಮಾರು ಮೂರುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ 5 ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದೆ.
ಈ ವೇಳೆ ಮಾತನಾಡಿದ ಬೆಂ. ಉತ್ತರ ವಿಭಾಗ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಬಿ.ಎಸ್. ಶ್ರೀವಾಣಿ, ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ನೆಲಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೆಣ್ಣು ಮಕ್ಕಳಿಗೆ ಉಪಯೋಗಿಸಲು ಸುಸಜ್ಜಿತವಾದ ಶೌಚಾಲಯ ನಿರ್ಮಿಸಿ ಇಂದು ಉದ್ಘಾಟನೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಸಂಪುಟ ಸಭೆ ಆರಂಭ: ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ? ಯಾವುದಕ್ಕೆ ಸಿಗಲಿದೆ ಅನುಮೋದನೆ
ಇನ್ನರ್ ವ್ಹೀಲ್ ಕ್ಲಬ್ನ ಎಲ್ಲ ಸದಸ್ಯರ ಒಮ್ಮತದಿಂದ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರ ಉತ್ತಮ ಸಹಕಾರದಿಂದ ಈ ಸಮಾಜಮುಖಿ ಕಾರ್ಯ ಮಾಡಲು ಸಾಧ್ಯವಾಗಿದೆ. ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಇನ್ನರ್ ವ್ಹೀಲ್ ಕ್ಲಬ್, ಅದರಲ್ಲೂ ಹೆಣ್ಣು ಮಕ್ಕಳ ಮೇಲಿರುವ ಗೌರವ, ಕಾಳಜಿಗೆ ಉಪಪ್ರಾಂಶುಪಾಲರು ಧನ್ಯವಾದ ತಿಳಿಸಿದ್ರು.