ಬೆಂಗಳೂರು: ತಿರುಮಲದಲ್ಲಿ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಕರ್ನಾಟಕ ಅತಿಥಿಗೃಹ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ಅಗತ್ಯ ಸಹಕಾರ ನೀಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದಾರೆ.
ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ 700 ವರ್ಷಗಳ ಹಿಂದೆಯೇ ಮೈಸೂರು ಅರಸರು ತಿರುಮಲದಲ್ಲಿ ಕಲ್ಯಾಣ ಮಂಟಪ, ಅತಿಥಿಗೃಹ ನಿರ್ಮಿಸಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದ್ದರು. ಆ ಜಾಗವನ್ನು 50 ವರ್ಷಕ್ಕೂ ಹೆಚ್ಚಿನ ಕಾಲದಿಂದ ಕರ್ನಾಟಕದ ಭಕ್ತರು ಬಳಕೆ ಮಾಡಿಕೊಳ್ಳುತ್ತಿದ್ದು, ಕರ್ನಾಟಕ ಸರ್ಕಾರ ಆ ಸ್ಥಳವನ್ನು ಅಭಿವೃದ್ಧಿಪಡಿಸಿದೆ. ಮುಜಿರಾಯಿ ಇಲಾಖೆ ನಿರ್ವಹಣೆ ಮಾಡಿಕೊಂಡು ಬಂದಿದೆ.

ಇನ್ನು ಆ ಜಾಗದಲ್ಲಿನ ಕಲ್ಯಾಣ ಮಂಟಪ ಹಾಗು ಅತಿಥಿ ಗೃಹ ತೆರವು ಮಾಡಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾಗ ಖಾಸಗಿ ವ್ಯಕ್ತಿಯೊಬ್ಬರು ಕೋರ್ಟ್ ಮೊರೆ ಹೋಗಿದ್ದರು. ಆದರೆ, ಆಂಧ್ರಪ್ರದೇಶದ ಹೈಕೋರ್ಟ್ ಆ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಅದರಂತೆ ಕರ್ನಾಟಕ ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಈ ಹಿನ್ನೆಲೆ ಅಭಿವೃದ್ಧಿ ಯೋಜನೆ ವಿವರವನ್ನು ಟಿಟಿಡಿಗೆ ನೀಡಿದ್ದು, ಭಕ್ತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಈ ಕಾಮಗಾರಿಗೆ ಅಗತ್ಯ ಸಹಕಾರ ನೀಡುವಂತೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಪತ್ರದ ಮೂಲಕ ಸಿಎಂ ಬಿಎಸ್ವೈ ಮನವಿ ಮಾಡಿದ್ದಾರೆ.