ಬೆಂಗಳೂರು: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲು ತೆರಳಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬಾವಿಗೆ ಬಿದ್ದಿದ್ದ ಆರೋಪಿಯನ್ನು ಯಲಹಂಕ ಠಾಣೆಯ ಕಾನ್ಸ್ಟೇಬಲ್ ಶಿವಕುಮಾರ್ ರಕ್ಷಿಸಿದ್ದಾರೆ. ಶಿವಕುಮಾರ್ ಅವರ ಈ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಗೋವಿಂದಪುರದ ಇಮ್ರಾನ್ ಬಂಧಿತ ಆರೋಪಿ. ಈತ ತಮಿಳುನಾಡಿನ ಧರ್ಮಪುರಿ ಸಮೀಪದ ತೂಪುರು ಗ್ರಾಮದಲ್ಲಿ ಅವಿತುಕೊಂಡಿದ್ದಾಗ ಯಲಹಂಕ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಓಡಿ ಹೋಗುವಾಗ ಬಾವಿಗೆ ಬಿದ್ದು ಇಮ್ರಾನ್ ಪ್ರಾಣಾಪಾಯದಲ್ಲಿ ಸಿಲುಕಿದ್ದ.
ಪ್ರಕರಣದ ವಿವರ:
ಅಕ್ಟೋಬರ್ 3 ರಂದು ಮಾರುತಿನಗರದ ಶೇಖರ್ ಎಂಬಾತನನ್ನು ಅಡ್ಡಗಟ್ಟಿ ಚಿನ್ನದ ಸರ, ಮೊಬೈಲ್ ಫೋನ್ ಮತ್ತು 3 ಸಾವಿರ ರೂಪಾಯಿ ದೋಚಿ ಇಮ್ರಾನ್ ಮತ್ತು ಆತನ ಸಹಚರರು ಪರಾರಿಯಾಗಿದ್ದರು. ಪ್ರಕರಣದ ತನಿಖೆ ಕೈಗೊಂಡು, ಘಟನಾ ಸ್ಥಳದಲ್ಲಿ ಸಿಕ್ಕ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಗೋವಿಂದಪುರ ಮೂಲದ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿತ್ತು. ಇದರನ್ವಯ ಸುಲಿಗೆಕೋರರ ಬೆನ್ನು ಹತ್ತಿದಾಗ ತಮಿಳುನಾಡಿನ ಧರ್ಮಪುರಿ ಸಮೀಪದ ತೂಪುರ ಗ್ರಾಮದಲ್ಲಿ ಆರೋಪಿಗಳು ಅಡಗಿರುವುದು ಪೊಲೀಸರಿಗೆ ಖಚಿತವಾಗಿತ್ತು.
ಇದನ್ನೂ ಓದಿ: ಪಾರ್ಟಿಯಲ್ಲಿ ಗಲಾಟೆ, ಕೊಲೆ ಯತ್ನ ಆರೋಪ: ಮೈಸೂರು ಮಾಜಿ ಉಪ ಮೇಯರ್ ವಿರುದ್ಧ FIR
ಸಬ್ ಇನ್ಸ್ಪೆಕ್ಟರ್ಗಳಾದ ಸುನಿಲ್ ಕುಮಾರ್ ಹಾಗೂ ಹರೀಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಲು ತಮಿಳುನಾಡಿಗೆ ತೆರಳಿತ್ತು. ಅಲ್ಲಿನ ಪೂಜಾ ಮಂದಿರದ ಸಮೀಪ ಇಬ್ಬರು ಆರೋಪಿಗಳನ್ನು ಸೆರೆ ಹಿಡಿಯಲಾಗಿತ್ತು. ಈ ವೇಳೆ ತಪ್ಪಿಸಿಕೊಳ್ಳುವ ಭರದಲ್ಲಿ ಒಬ್ಬಾತ ಬಾವಿಗೆ ಬಿದ್ದು ಜೀವಕ್ಕೆ ಕುತ್ತು ತಂದುಕೊಂಡಿದ್ದ. ಜೋರಾಗಿ ಸುರಿಯುತ್ತಿದ್ದ ಮಳೆ ನಡುವೆಯೂ ತನಿಖಾ ತಂಡದಲ್ಲಿದ್ದ ಕಾನ್ಸ್ಟೇಬಲ್ ಶಿವಕುಮಾರ್, ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದು ಬಾವಿಯಲ್ಲಿ ಒದ್ದಾಡುತ್ತಿದ್ದ ಆರೋಪಿಯನ್ನು ಮೇಲಕ್ಕೆ ಎತ್ತಿ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಧರ್ಮಪುರಿ ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ಕೊಡಿಸಿದ್ದು, ಮೂವರು ಆರೋಪಿಗಳನ್ನು ಬೆಂಗಳೂರಿಗೆ ಕರೆತರಲಾಗಿದೆ. ಇನ್ನೊಬ್ಬ ಆರೋಪಿಯನ್ನು ದೇವನಹಳ್ಳಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಈ ನಾಲ್ವರು ಆರೋಪಿಗಳಿಂದ 66.55 ಸಾವಿರ ರೂ ಮೌಲ್ಯದ 10 ಗ್ರಾಂ ಚಿನ್ನದ ಚೈನ್, ಎರಡು ಬೈಕ್‍ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.